ಆಡು ಕಳ್ಳರೆಂಬ ಶಂಕೆ | ಗುಂಪಿನಿಂದ ಥಳಿಸಿ ಯುವಕನ ಹತ್ಯೆ
ಪಾಟ್ನಾ : ಆಡು ಕಳ್ಳರೆಂದು ಶಂಕಿಸಿ ಉದ್ರಿಕ್ತ ಗುಂಪೊಂದು ಯುವಕನೋರ್ವನನ್ನು ಥಳಿಸಿ ಹತ್ಯೆಗೈದ ಹಾಗೂ ಇನ್ನೋರ್ವ ಯುವಕನನ್ನು ಥಳಿಸಿ ಗಂಭೀರ ಗಾಯಗೊಳಿಸಿದ ಘಟನೆ ಬಿಹಾರದ ಬೇಗುಸರಾಯಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಮೃತಪಟ್ಟ ಯುವಕನನ್ನು ರೋಹಿತ್ ಕುಮಾರ್ (24) ಎಂದು ಗುರುತಿಸಲಾಗಿದೆ. ಜೊತೆಯಲ್ಲಿದ್ದ ಇನ್ನೋರ್ವ ಯುವಕನನ್ನು ರಾಹುಲ್ ಕುಮಾರ್ ಪಾಸ್ವಾನ್ (25)ನ ಎಂದು ಗುರುತಿಸಲಾಗಿದೆ. ಈತ ಗಂಭೀರ ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಗುಸರಾಯಿ ಜಿಲ್ಲೆಯ ‘ವನಾಂದಪುರ ಗ್ರಾಮದ ನಿವಾಸಿ ಮನೋಜ್ ಪಾಸ್ವಾನ್ ಗೆ ಸೇರಿದ ಆಡನ್ನು ಕದ್ದು ಪರಾರಿಯಾಗುತ್ತಿದ್ದಾರೆ ಎಂದು ಶಂಕಿಸಲಾದ ಈ ಇಬ್ಬರು ಯುವಕರ ಮೋಟರ್ ಬೈಕ್ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ ಹಾಗೂ ಅವರು ಗುಂಪಿನ ಕೈಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ಗುಂಪು ಅವರನ್ನು ಮರಕ್ಕೆ ಕಟ್ಟಿ ಹಾಕಿದೆ. ಲಾಠಿ ಹಾಗೂ ಕಬ್ಬಿಣದ ಸಲಾಕೆಯಿಂದ ಥಳಿಸಿದೆ. ಇದರಿಂದ ಗಂಭೀರ ಗಾಯಗೊಂಡ ಬೀರ್ಪುರ ಪಶ್ಚಿಮ ಗ್ರಾಮದ ನಿವಾಸಿಯಾಗಿರುವ ರೋಹಿತ್ ಕುಮಾರ್ ಅನಂತರ ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡ ರಾಹುಲ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾಯುವ ಮುನ್ನ ರೋಹಿತ್ ಕುಮಾರ್, ತಾನು ರಾಹುಲ್ನೊಂದಿಗೆ ಅಪರಿಚಿತ ಸ್ಥಳದಲ್ಲಿ ಮೋಟಾರು ಬೈಕ್ನಲ್ಲಿ ಸಾಗುತ್ತಿದ್ದಾಗ ಆಡೊಂದು ಇದ್ದಕ್ಕಿದ್ದಂತೆ ಚಕ್ರಕ್ಕೆ ಸಿಲುಕಿತು. ಸ್ಥಳೀಯರು ನಮ್ಮನ್ನು ಆಡು ಕಳ್ಳರು ಎಂದು ಶಂಕಿಸಿ ಥಳಿಸಿದರು ಎಂದು ಹೇಳಿರುವುದಾಗಿ ಆತನ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಮೃತಪಟ್ಟ ರೋಹಿತ್ ರಾಜಸ್ಥಾನದಲ್ಲಿ ದಿನಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆತ ಇತ್ತೀಚೆಗೆ ತನ್ನ ಊರಿಗೆ ಮರಳಿದ್ದ. ಶುಕ್ರವಾರ ರೋಹಿತ್ ತನ್ನ ಗೆಳೆಯನೊಂದಿಗೆ ಗುಂಪೊಂದರ ಕೈಯಲ್ಲಿ ಸಿಲುಕಿದರು. ಗುಂಪು ಅವರಿಗೆ ನಿರ್ದಯವಾಗಿ ಥಳಿಸಿತು ಎಂದು ಬೇಗುಸರಾಯಿ ಪೊಲೀಸ್ ಅಧೀಕ್ಷಕ ಮನೀಷ್ ತಿಳಿಸಿದ್ದಾರೆ.
‘ವಾನಂದಪುರ ಗ್ರಾಮದಲ್ಲಿ ಆಡು ಕಳವುಗೈದ ಬಳಿಕ ಇಬ್ಬರು ಪರಾರಿಯಾದರು. ಅವರನ್ನು ಗ್ರಾಮಸ್ಥರು ಬೆನ್ನಟ್ಟಿಕೊಂಡು ಹೋದರು. ಈ ಸಂದರ್ಭ ಅವರ ಮೋಟಾರ್ಬೈಕ್ ಮೋರಿಯೊಂದಕ್ಕೆ ಢಿಕ್ಕಿ ಹೊಡೆಯಿತು ಹಾಗೂ ಅವರು ರಸ್ತೆಗೆ ಬಿದ್ದರು. ಗುಂಪು ಅವರನ್ನು ಸಮೀಪದ ತೋಟವೊಂದಕ್ಕೆ ಕರೆದೊಯ್ದಿತು, ಮರಕ್ಕೆ ಕಟ್ಟಿ ಹಾಕಿತು ಹಾಗೂ ಪ್ರಜ್ಞೆ ತಪ್ಪುವ ವರೆಗೆ ಥಳಿಸಿತು ಎಂದು ಪ್ರಾಥಮಿಕ ವರದಿ ಹೇಳಿದೆ.
‘‘ಕಾನೂನು ಕೈಗೆತ್ತಿಕೊಂಡ ವ್ಯಕ್ತಿಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರು ಯಾರೇ ಆಗಿದ್ದರು ಬಿಡುವುದಿಲ್ಲ. ಪುರಾವೆಗಳ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಬೇಗುಸರಾಯಿ ಎಸ್ಪಿ ತಿಳಿಸಿದ್ದಾರೆ.
‘‘ಮೃತಪಟ್ಟ ರೋಹಿತ್ನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಆತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು’’ ಅವರು ತಿಳಿಸಿದ್ದಾರೆ.