ಅನಿಲ್ ಅಂಬಾನಿ ಸೆಬಿ ಆದೇಶ ಪರಿಶೀಲಿಸುತ್ತಿದ್ದಾರೆ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ: ಹೇಳಿಕೆ
ಅನಿಲ್ ಅಂಬಾನಿ - Photo : financialexpress
ಹೊಸದಿಲ್ಲಿ : ಉದ್ಯಮಿ ಅನಿಲ್ ಅಂಬಾನಿಯವರು ಹಣ ದುರ್ಬಳಕೆಯ ಆರೋಪದಲ್ಲಿ ತನ್ನನ್ನು ಐದು ವರ್ಷಗಳ ಅವಧಿಗೆ ಶೇರುಪೇಟೆಯಿಂದ ನಿಷೇಧಿಸಿರುವ ಮತ್ತು ತನಗೆ 25 ಕೋಟಿ ರೂಪಾಯಿ ದಂಡವನ್ನು ವಿಧಿಸಿರುವ ಸೆಬಿ ಆದೇಶವನ್ನು ಪರಿಶೀಲಿಸುತ್ತಿದ್ದಾರೆ. ಕಾನೂನು ಸಲಹೆಯಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಅವರ ವಕ್ತಾರರು ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿ.(ಆರ್ಎಚ್ಎಫ್ಎಲ್)ಗೆ ಸಂಬಂಧಿಸಿದ ವಿಷಯದಲ್ಲಿ 2022,ಫೆ.11ರ ಸೆಬಿಯ ಮಧ್ಯಂತರ ಆದೇಶಕ್ಕೆ ಅನುಗುಣವಾಗಿ ಅಂಬಾನಿ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿ. ಮತ್ತು ರಿಲಯನ್ಸ್ ಪವರ್ ಲಿ.ನ ಆಡಳಿತ ಮಂಡಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಅವರು ಕಳೆದ ಎರಡೂವರೆ ವರ್ಷಗಳಿಂದಲೂ ಸೆಬಿ ಆದೇಶಕ್ಕೆ ಬದ್ಧರಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆ.22ರ ತನ್ನ ಆದೇಶದಲ್ಲಿ ಸೆಬಿ, ಆರ್ಎಚ್ಎಫ್ಎಲ್ ನ ಹಣವನ್ನು ದುರುಪಯೋಗ ಮಾಡಿಕೊಂಡ ಪ್ರಕರಣದಲ್ಲಿ ಅಂಬಾನಿ ಮತ್ತು ಇತರ 24 ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಐದು ವರ್ಷಗಳ ಅವಧಿಗೆ ಷೇರುಪೇಟೆಯಿಂದ ನಿಷೇಧಿಸಿದೆ ಮತ್ತು ಕೋಟ್ಯಂತರ ರೂ.ಗಳ ದಂಡವನ್ನು ವಿಧಿಸಿದೆ.
ಸೆಬಿ ಮುಂದಿರುವ ಕಲಾಪಗಳು ತಮಗೆ ಸಂಬಂಧಿಸಿಲ್ಲ ಮತ್ತು ಅದರ ಆದೇಶವು ತಮ್ಮ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.ಅಂಬಾನಿ 2022ರಲ್ಲಿಯೇ ಆಡಳಿತ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿ.ಮತ್ತು ರಿಲಯನ್ಸ್ ಪವರ್ ಲಿ.ಪ್ರತ್ಯೇಕ ಹೇಳಿಕೆಗಳಲ್ಲಿ ತಿಳಿಸಿವೆ.