ಬಜೆಟ್ನಲ್ಲಿ ನೆರೆ ಪೀಡಿತ ಬಿಹಾರ, ಅಸ್ಸಾಂ, ಹಿಮಾಚಲ ಪ್ರದೇಶ, ಸಿಕ್ಕಿಂಗೆ ಹಣಕಾಸು ನೆರವು ಘೋಷಣೆ
PC : ANI
ಹೊಸದಿಲ್ಲಿ: ನೆರೆ ಹಾಗೂ ಪ್ರಾಕೃತಿಕ ವಿಕೋಪದಿಂದ ಭಾರೀ ಹಾನಿ ಹಾಗೂ ವ್ಯಾಪಕ ನಷ್ಟ ಎದುರಿಸುತ್ತಿರುವ ಹಲವು ಪ್ರದೇಶಗಳಿಗೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ಹಣಕಾಸು ನೆರವು ಘೋಷಿಸಿದ್ದಾರೆ.
ಬಿಹಾರ, ಅಸ್ಸಾಂ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಸಿಕ್ಕಿಂಗೆ ಅವರು ಈ ನೆರವು ಘೋಷಿಸಿದ್ದಾರೆ.
ದೇಶದ ಹೊರಗೆ ಹುಟ್ಟುವ ಹಲವು ನದಿಗಳಿಂದ ಉಂಟಾಗುವ ನೆರೆಯಿಂದ ಬಿಹಾರ್ ನಿರಂತರ ತೊಂದರೆಗೊಳಗಾಗಿದೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್, ನೇಪಾಳದಲ್ಲಿ ನೆರೆ ನಿಯಂತ್ರಣ ರಚನೆ ನಿರ್ಮಾಣ ಮಾಡುವ ಯೋಜನೆ ಇನ್ನಷ್ಟೆ ಪ್ರಗತಿಯಾಗಬೇಕಿದೆ ಎಂದರು.
ವೇಗವರ್ಧಿತ ನೀರಾವರಿ ಸೌಲಭ್ಯ ಯೋಜನೆ (ಎಐಬಿಜಿ) ಹಾಗೂ ಇತರ ಯೋಜನೆಗಳ ಮೂಲಕ ಸರಕಾರ ಕೋಶಿ-ಮೇಚಿ ರಾಜ್ಯದೊಳಗೆ ಜೋಡಣೆ ಹಾಗೂ ಅಣೆಕಟ್ಟು, ನದಿ ಮಾಲಿನ್ಯ ತಗ್ಗಿಸುವಿಕೆ ಹಾಗೂ ನೀರಾವರಿ ಯೋಜನೆಗಳು ಸೇರಿದಂತೆ 20 ನಡೆಯುತ್ತಿರುವ ಯೋಜನೆಗಳು ಹಾಗೂ ಹೊಸ ಯೋಜನೆಗಳಿಗೆ ಅಂದಾಜು ವೆಚ್ಚ 11,500 ಕೋ.ರೂ.ನ ಯೋಜನೆಗಳಿಗೆ ಸರಕಾರ ಹಣಕಾಸು ನೆರವು ನೀಡಲಿದೆ ಎಂದು ಅವರು ತಿಳಿಸಿದರು.
ಇದಲ್ಲದೆ, ನೆರೆ ತಗ್ಗಿಸುವಿಕೆ ಹಾಗೂ ನೀರಾವರಿ ಯೋಜನೆಗಳಿಗೆ ಸಂಬAಧಿಸಿದ ಕೋಶಿ ನದಿಯ ಸಮೀಕ್ಷೆ ಹಾಗೂ ಪರಿಶೀಲನೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಾರತದ ಹೊರಗೆ ಹುಟ್ಟುವ ಬ್ರಹ್ಮಪುತ್ರಾ ನದಿ ಹಾಗೂ ಅದರ ಉಪ ನದಿಗಳಿಂದ ಅಸ್ಸಾಂ ಪ್ರತಿ ವರ್ಷ ತೊಂದರೆಗೀಡಾಗುತ್ತಿದೆ. ನಾವು ಅಸ್ಸಾಂಗೆ ನೆರೆ ನಿರ್ವಹಣೆ ಹಾಗೂ ಅದಕ್ಕೆ ಸಂಬAಧಿಸಿದ ಯೋಜನೆಗಳಿಗೆ ನೆರವು ನೀಡಲಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದರು.
ಸರಕಾರ ಬಹುಪಕ್ಷೀಯ ಅಭಿವೃದ್ಧಿ ನೆರವಿನ ಮೂಲಕ ಮರು ನಿರ್ಮಾಣ ಹಾಗೂ ಪುನರ್ವಸತಿಗೆ ಹಿಮಾಚಲ ಪ್ರದೇಶಕ್ಕೆ ನೆರವು ನೀಡಲಿದೆ ಎಂದು ಅವರು ಹೇಳಿದರು.
ಮೋಡ ಸ್ಫೋಟಗಳು, ವಿನಾಶಕಾರಿ ಹಠಾತ್ ಪ್ರವಾಹ ಹಾಗೂ ಭಾರೀ ಭೂಕುಸಿತದಿಂದ ನಷ್ಟ ಅನುಭವಿಸಿರುವ ಉತ್ತರಾಖಂಡ ಹಾಗೂ ಸಿಕ್ಕಿಂಗೆ ಕೂಡ ಸರಕಾರ ನೆರವು ನೀಡಲಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಈ ನಡುವೆ ನಿರ್ಮಲಾ ಸೀತಾರಾಮನ್ ಅವರು ರಸ್ತೆ ಸಂಪರ್ಕ ಯೋಜನೆಗಳು ಸೇರಿದಂತೆ ಬಿಹಾರದ ಹಲವು ಅಭಿವೃದ್ಧಿ ಯೋಜನೆಗಳಿಗೆ (ಪಾಟ್ನಾ-ಪುರ್ನಿಯಾ ಎಕ್ಸ್ಪ್ರೆಸ್ವೇ, ಬಕ್ಸಾರ್-ಭಾಗಲ್ಪುರ ಎಕ್ಸ್ಪ್ರೆಸ್ವೆ, ಭೋಧ್ಗಾಯಾ, ರಾಜ್ಗೀರ್, ವೈಶಾಲಿ ಹಾಗೂ ದರ್ಭಾಂಗ ಉಪ ರಸ್ತೆ ಹಾಗೂ ಬಕ್ಸಾರ್ನಲ್ಲಿರುವ ಗಂಗಾ ನದಿ ಮೇಲಿನ ಹೆಚ್ಚುವರಿ 2 ಲೇನ್ ಸೇತುವೆ) ಒಟ್ಟು 26,000 ಕೋ.ರೂ. ಘೋಷಿಸಿದರು.