ಬೈಜೂಸ್ ಸಂಸ್ಥಾಪಕ ರವೀಂದ್ರನ್ಗೆ ಮತ್ತೊಂದು ಸಂಕಷ್ಟ
ಬೈಜೂಸ್ ರವೀಂದ್ರನ್ | Photo : X
ಹೊಸದಿಲ್ಲಿ: ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ ಬೈಜೂಸ್ ಮತ್ತೊಂದು ಸಮಸ್ಯೆಯ ಸುಳಿಗೆ ಸಿಲುಕಿದ್ದು, ಅದರ ಸಂಸ್ಥಾಪಕ ಬೈಜೂಸ್ ರವೀಂದ್ರನ್ಗೆ ದೇಶದ ಹೊರಗೆ ಪ್ರಯಾಣಿಸದಂತೆ ಜಾರಿ ನಿರ್ದೇಶನಾಲಯವು ಸೂಚಿಸಿದೆ. 43 ವರ್ಷದ ಈ ಉದ್ಯಮಿಯ ವಿರುದ್ಧ ಜಾರಿ ನಿರ್ದೇಶನಾಲಯವು ಲುಕ್ ಔಟ್ ಸುತ್ತೋಲೆ ಜಾರಿಗೊಳಿಸಿದೆ.
ಇದಕ್ಕೂ ಮುನ್ನ ಜಾರಿ ನಿರ್ದೇಶನಾಲಯವು ಮಾಹಿತಿಯನ್ನು ಆಧರಿಸಿದ ಲುಕ್ ಔಟ್ ಸುತ್ತೋಲೆಯನ್ನು ಜಾರಿಗೊಳಿಸಿತ್ತು. ಇದರರ್ಥ, ರವೀಂದ್ರನ್ ಅವರಿಗೆ ಸಂಬಂಧಿಸಿದ ಯಾವುದೇ ವಿದೇಶ ಪ್ರವಾಸಗಳ ಕುರಿತು ವಲಸೆ ಪ್ರಾಧಿಕಾರಗಳು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಬಹುದಿತ್ತು. ಆದರೀಗ ರವೀಂದ್ರನ್ ಅವರನ್ನು ದೇಶದಿಂದ ಹೊರ ಹೋಗದಂತೆ ತಡೆಯಬಹುದಾಗಿದೆ.
ಶಿಕ್ಷಣ ತಂತ್ರಜ್ಞಾನ ಸಂಸ್ಥೆಯಾದ ಬೈಜೂಸ್ ಒಂದು ಸಮಯದಲ್ಲಿ 20 ಶತ ಕೋಟಿ ಡಾಲರ್ ಮೌಲ್ಯ ಹೊಂದಿತ್ತು. ಆದರೆ, ಇತ್ತೀಚೆಗೆ ಪತನಕ್ಕೆ ಗುರಿಯಾಗಿರುವ ಈ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಶೇ. 90ರಷ್ಟು ನಷ್ಟ ಅನುಭವಿಸಿದೆ. ಈ ಸಂಸ್ಥೆಯು ಪ್ರಮುಖ ಹೂಡಿಕೆದಾರರನ್ನು ಕಳೆದುಕೊಂಡಿದ್ದು, ಲೆಕ್ಕ ಪರಿಶೋಧಕ ಸಂಸ್ಥೆ ಡೆಲ್ಲಾಯಿಟ್ ಈ ಸಂಸ್ಥೆಗೆ ರಾಜಿನಾಮೆ ನೀಡಿದೆ. 1.2 ಶತ ಕೋಟಿ ಸಾಲಕ್ಕೆ ಸಂಬಂಧಿಸಿದಂತೆ ಬೈಜೂಸ್ ಸಂಸ್ಥೆಯು ಅಮೆರಿಕಾದಲ್ಲಿ ಕಾನೂನು ಪ್ರಕ್ರಿಯೆಯನ್ನೂ ಎದುರಿಸುತ್ತಿದೆ.