ಹಿಂದೂ-ಮುಸ್ಲಿಂ ರಾಜಕಾರಣ ಹೊರತುಪಡಿಸಿ ‘ನಿರ್ಗಮನ’ ಪ್ರಧಾನಿಗೆ ಮಾತನಾಡಲು ಬೇರೆ ವಿಷಯವಿಲ್ಲ : ಕಾಂಗ್ರೆಸ್ ಲೇವಡಿ
ನರೇಂದ್ರ ಮೋದಿ ̧ ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ: ‘ನಿರ್ಗಮನ’ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹಿಂದೂ-ಮುಸ್ಲಿಂ ರಾಜಕೀಯ ಹೊರತುಪಡಿಸಿ ಮಾತನಾಡಲು ಬೇರೆ ವಿಷಯವಿಲ್ಲ ಎಂದು ಕಾಂಗ್ರೆಸ್ ಬುಧವಾರ ಆಪಾದಿಸಿದೆ. ‘ಮೋದಿ ಕೀ ಗ್ಯಾರಂಟಿ’ ಹಾಗೂ ‘400 ಪಾರ್ (400ಕ್ಕೂ ಅಧಿಕ ಸ್ಥಾನ)’ ಘೋಷಣೆಗಳನ್ನು ಬಿಜೆಪಿಯು ಈಗ ಸದ್ದಿಲ್ಲದೆ ಹೂತುಹಾಕಿದೆ ಎಂದು ಅದು ಟೀಕಿಸಿದೆ.
‘ಹಿಂದೂ-ಮುಸ್ಲಿಂ ಕಾರ್ಡ್ ಬಳಸಿದಲ್ಲಿ ತಾನು ಸಾರ್ವಜನಿಕ ಜೀವನಕ್ಕೆ ಯೋಗ್ಯನಲ್ಲ’ ಎಂದು ಪ್ರಧಾನಿ ಮೋದಿ ನ್ಯೂಸ್ 18 ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಬಳಿಕ ಕಾಂಗ್ರೆಸ್ ಈ ವಾಗ್ದಾಳಿಯನ್ನು ನಡೆಸಿದೆ.
ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು, ‘‘ನಿರ್ಗಮನ ಪ್ರಧಾನಿಯವರಿಗೆ ಸುಳ್ಳು ಹೇಳುವುದೇ ರೋಗವಾಗಿ ಬಿಟ್ಟಿದೆ’’ ಎಂದು ಟೀಕಿಸಿದ್ದಾರೆ.
‘‘ ಅವರ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆಯೆಂದರೆ, ತಾನು ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲವೆಂಬ ಮೋದಿಯವರ ಹೇಳಿಕೆಯು, ಅವರು ದಿನದಿಂದ ಸುಳ್ಳು ಹೇಳುವಲ್ಲಿ ಆತ ಹೊಸ ಆಳವನ್ನು ತಲುಪಿರುವುದನ್ನು ತೋರಿಸುತ್ತಿದೆ.’’ ಎಂದರು. 2024ರ ಎಪ್ರಿಲ್ 19ರಿಂದ ‘ನಿರ್ಗಮನ ’ ಪ್ರಧಾನಿಯವರು ನಿರ್ಲಜ್ಜವಾಗಿ ಕೋಮುವಾದಿ ಭಾಷೆ, ಸಂಕೇತಗಳನ್ನು ಹಾಗೂ ಪ್ರಸ್ತಾವನೆಗಳನ್ನು ಬಳಸುತ್ತಿದ್ದಾರೆ. ಈ ವಿಷಯವನ್ನು ಚುನಾವಣಾ ಆಯೋಗದ ಗಮನಕ್ಕೂ ನಾವು ತಂದಿದ್ದೇವು. ಈ ಬಗ್ಗೆ ಕ್ರಮವನ್ನು ಕೈಗೊಳ್ಳಬೇಕಿತ್ತಾದರೂ ಅದು ಸಾಧ್ಯವಾಗಲಿಲ್ಲ’’ ಎಂದವರು ತಿಳಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕರ ಬೊಕ್ಕಸದಿಂದ ಭಾರೀ ವೆಚ್ಚ ಮಾಡಿ ಪ್ರಚಾರ ಮಾಡಲಾಗಿದ್ದ ‘ಮೋದಿ ಕೀ ಗ್ಯಾರಂಟಿ’ ಘೋಷಣೆ ಮಖಾಡೆ ಮಲಗಿದೆ. ಹಾಗೆಯೇ 400 ಪಾರ್ (ನಾಲ್ಕುನೂರಕ್ಕಿಂತ ಅಧಿಕ ಸ್ಥಾನ) ಘೋಷಣೆಯನ್ನೂ ಸದ್ದಿಲ್ಲದೆ ಹೂತುಹಾಕಲಾಗಿದೆ ’’ ಎಂದು ರಮೇಶ್ ಹೇಳಿದರು.
ಪ್ರತಿಯೊಬ್ಬ ಭಾರತೀಯ ಪೌರನಿಗೂ ಸಮಾ ಅಭಿವೃದ್ದಿಯನ್ನು ಖಾತರಿಪಡಿಸುವ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಮೈತ್ರಿಕೂಟದ ಕಾರ್ಯಸೂಚಿಯ ಕುರಿತು ಸುಳ್ಳುಗಳನ್ನು ಹರಡುವ ಹತಾಶ ಯತ್ನವನ್ನು ಮಾಡುತ್ತಿದ್ದಾರೆ ಎಂದು ರಮೇಶ್ ಹೇಳಿದರು.