‘ಇಂಡಿಯಾ’ ಮೈತ್ರಿಕೂಟಕ್ಕೆ ಆಪ್ ಬದ್ಧ: ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ಪ್ರತಿಪಕ್ಷ ಒಕ್ಕೂಟ ‘ಇಂಡಿಯಾ’ಕ್ಕೆ ಆಮ್ ಆದ್ಮಿ ಪಕ್ಷ (ಆಪ್)ವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪಕ್ಷದ ಮುಖ್ಯಸ್ಥ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ. ಪಂಜಾಬ್ ನಲ್ಲಿ ಮಾದಕವಸ್ತು ಹೊಂದಿದ ಆರೋಪದಲ್ಲಿ ಕಾಂಗ್ರೆಸ್ ಶಾಸಕ ಸುಖ್ಪಾಲ್ ಖೈರಾ ಬಂಧನಕ್ಕೊಳಗಾದ ಬಳಿಕ, ಕಾಂಗ್ರೆಸ್ ಮತ್ತು ಆಪ್ ನಾಯಕರ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದ್ದಾರೆ.
ಕೇಜ್ರಿವಾಲ್ ಈ ತಿಂಗಳ ಆರಂಭದಲ್ಲೂ, ‘ಇಂಡಿಯಾ’ ಒಕ್ಕೂಟದಲ್ಲಿ ಆಂತರಿಕ ಕಚ್ಚಾಟ ನಡೆಯುತ್ತಿದೆ ಎಂಬ ಊಹಾಪೋಹಗಳನ್ನು ನಿರಾಕರಿಸಿದ್ದರು. ಈಗ ಮತ್ತೊಮ್ಮೆ ಸಮಸ್ಯೆಗಳ ಉಪಶಮನಕ್ಕೆ ಮುಂದಾಗಿದ್ದಾರೆ. ‘‘ಆಪ್ ‘ಇಂಡಿಯ’ಕ್ಕೆ ಬದ್ಧವಾಗಿದೆ. ‘ಇಂಡಿಯ’ ಒಕ್ಕೂಟದಿಂದ ಆಪ್ ಬೇರ್ಪಡುವುದಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಅದೇ ವೇಳೆ, ಮಾದಕವಸ್ತು ವಿರುದ್ಧದ ಸಮರಕ್ಕೂ ತನ್ನ ಪಕ್ಷ ಬದ್ಧವಾಗಿದೆ ಎಂದು ಅವರು ಹೇಳಿದರು. ‘‘ಪಂಜಾಬ್ ಪೊಲೀಸರು ನಿನ್ನೆ ಯಾವುದೋ ಕಾಂಗ್ರೆಸ್ ನಾಯಕನನ್ನು ಬಂಧಿಸಿದ್ದಾರೆ ಎನ್ನುವುದು ನನಗೆ ತಿಳಿದಿದೆ. ಅದರ ವಿವರಗಳು ನನಗೆ ತಿಳಿದಿಲ್ಲ. ಅದನ್ನು ನೀವು ಪೊಲೀಸರಿಂದ ಪಡೆಯಬಹುದು. ನಾವು ಮಾದಕವಸ್ತು ವಿರುದ್ಧ ಸಮರವನ್ನು ಘೋಷಿಸಿದ್ದೇವೆ. ಯಾವುದೋ ಬಿಡಿ ಪ್ರಕರಣದ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ಮಾದಕವಸ್ತು ಚಟವನ್ನು ಕೊನೆಗೊಳಿಸಲು ನಾವು ಬದ್ಧರಾಗಿದ್ದೇವೆ’’ ಎಂದು ಅವರು ಹೇಳಿದರು.
2015ರ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿ ಖೈರಾರನ್ನು ಬಂಧಿಸಲಾಗಿದ್ದು, ಆಪ್ ಮತ್ತು ಕಾಂಗ್ರೆಸ್ ನಡುವಿನ ಘರ್ಷಣೆಗೆ ತುಪ್ಪ ಸುರಿದಿದೆ. ಈ ಎರಡೂ ಪಕ್ಷಗಳು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ರಚಿಸಲಾಗಿರುವ ‘ಇಂಡಿಯ’ ಪ್ರತಿಪಕ್ಷ ಒಕ್ಕೂಟದ ಭಾಗವಾಗಿವೆ.