ಸಿಇಸಿ ಜೊತೆ ಸ್ಪಷ್ಟ ಭಿನ್ನಾಭಿಪ್ರಾಯಗಳಿಂದಾಗಿ ಅರುಣ್ ಗೋಯೆಲ್ ರಾಜೀನಾಮೆ : ವರದಿ
Photo : NDTV
ಹೊಸದಿಲ್ಲಿ: ಲೋಕಸಭಾ ಚುನಾವಣೆಗಳ ಘೋಷಣೆಗೆ ಒಂದು ವಾರವೂ ಉಳಿದಿಲ್ಲ,ಅಷ್ಟರಲ್ಲೇ ಚುನಾವಣಾ ಆಯುಕ್ತ (ಇಸಿ) ಅರುಣ್ ಗೋಯೆಲ್ ಅವರ ದಿಢೀರ್ ಮತ್ತು ಅನಿರೀಕ್ಷಿತ ರಾಜೀನಾಮೆಯು ಹಲವರಿಗೆ ಅಚ್ಚರಿಯನ್ನುಂಟು ಮಾಡಿದೆ. ಆದರೆ ಲೋಕಸಭಾ ಚುನಾವಣೆಗಳಿಗಾಗಿ ಸಿದ್ಧತೆಗಳನ್ನು ಪರಿಶೀಲಿಸಲು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಗೋಯೆಲ್ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ನಡುವೆ ಉದ್ಭವಿಸಿದ್ದ ಸ್ಪಷ್ಟ ಭಿನ್ನಾಭಿಪ್ರಾಯಗಳು ಇಸಿ ರಾಜೀನಾಮೆಗೆ ಕಾರಣವಾಗಿವೆ ಎಂದು ಆಯೋಗದಲ್ಲಿಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಉನ್ನತ ಮೂಲಗಳ ಪ್ರಕಾರ, ಕುಮಾರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಗೋಯೆಲ್ ಅವರು ಪಶ್ಚಿಮ ಬಂಗಾಳದಲ್ಲಿ ಸಿದ್ಧತೆಗಳ ಕುರಿತು ವಿವರಗಳನ್ನು ನೀಡಲು ಮಾ.5ರಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು ಮತ್ತು ಕುಮಾರ್ ಒಬ್ಬರೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು.
ಗೋಯೆಲ್ ‘ಆರೋಗ್ಯ ಕಾರಣಗಳಿಂದಾಗಿ’ ದಿಲ್ಲಿಗೆ ಮರಳಿದ್ದಾರೆ ಎಂದು ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಇದನ್ನು ತಳ್ಳಿಹಾಕಿರುವ ಗೋಯೆಲ್ಗೆ ನಿಕಟ ಮೂಲಗಳು, ಅವರು ಆರೋಗ್ಯವಾಗಿಯೇ ಇದ್ದರು ಮತ್ತು ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ತನ್ನ ಪಶ್ಚಿಮ ಬಂಗಾಳ ಭೇಟಿಯನ್ನು ಮೊಟಕುಗೊಳಿಸಿ ದಿಲ್ಲಿಗೆ ಮರಳಿದ್ದರು ಎಂದು ಪ್ರತಿಪಾದಿಸಿವೆ.
ಆದಾಗ್ಯೂ, ಉಭಯ ಅಧಿಕಾರಿಗಳ ನಡುವೆ ಏನು ನಡೆದಿತ್ತು. ಅವರ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ನಿಖರವಾಗಿ ಯಾವ ವಿಷಯಗಳಲ್ಲಿ ಅವರು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು ಎನ್ನುವುದು ತಿಳಿದುಬಂದಿಲ್ಲ. ಮೂಲಗಳೂ ಇದನ್ನು ವಿವರಿಸಿಲ್ಲ. ನವಂಬರ್ 2027ರವರೆಗೆ ಅಧಿಕಾರಾವಧಿಯನ್ನು ಹೊಂದಿದ್ದ ಗೋಯೆಲ್ ಮುಂದಿನ ವರ್ಷ ಸಿಇಸಿ ಹುದ್ದೆಗೇರಲಿದ್ದರು.
ಗೋಯೆಲ್ ಮಾ.7ರಂದು ಚುನಾವಣಾ ಆಯೋಗದ ಮುಖ್ಯ ಕಚೇರಿಯಲ್ಲಿ ಲೋಕಸಭಾ ಚುನಾವಣೆಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಆದರೆ ಮಾ.8ರಂದು ಚುನಾವಣಾ ಸಿದ್ಧತೆಗಳ ಕುರಿತು ಚುನಾವಣಾ ಆಯೋಗ ಮತ್ತು ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಕುಮಾರ್ ಭಲ್ಲಾ ನಡುವಿನ ಸಭೆಗೆ ಗೈರಾಗಿದ್ದರೆನ್ನಲಾದ ಗೋಯೆಲ್ ಸಿಇಸಿಗೆ ಮಾಹಿತಿ ನೀಡದೆ ತನ್ನ ರಾಜೀನಾಮೆಯನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದ್ದರು.
ಗೋಯೆಲ್ ರಾಜೀನಾಮೆ ನೀಡುವುದನ್ನು ತಡೆಯಲು ಮತ್ತು ಕುಮಾರ್ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸರಕಾರದಿಂದ ಪ್ರಯತ್ನಗಳು ನಡೆದಿದ್ದವು. ಆದರೆ ಅವರು ರಾಜೀನಾಮೆ ನೀಡುವ ಬಗ್ಗೆ ದೃಢ ನಿಲುವು ಹೊಂದಿದ್ದರು ಎಂದು ಸರಕಾರದಲ್ಲಿಯ ಅಧಿಕಾರಿಗಳು ತಿಳಿಸಿದರು.
ರಾಷ್ಟ್ರಪತಿಗಳು ಮಾ.9ರಂದು ಗೋಯೆಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಕಾನೂನು ಮತ್ತು ನ್ಯಾಯ ಸಚಿವಾಲಯವು ಈ ಬಗ್ಗೆ ಅದೇ ದಿನ ಗಝೆಟ್ ಅಧಿಸೂಚನೆಯನ್ನು ಹೊರಡಿಸಿತ್ತು.
ಬಹುಶಃ ಸಿಇಸಿ ಮತ್ತು ಸರಕಾರದ ಇತರ ಉನ್ನತ ಅಧಿಕಾರಿಗಳನ್ನು ಹೊರತುಪಡಿಸಿ ಗಝೆಟ್ ಅಧಿಸೂಚನೆ ಹೊರಬೀಳುವವರೆಗೂ ಚುನಾವಣಾ ಆಯೋಗದಲ್ಲಿದ್ದವರೂ ಸೇರಿದಂತೆ ಯಾರಿಗೂ ಗೋಯೆಲ್ ಅವರ ಹಠಾತ್ ರಾಜೀನಾಮೆ ನಿರ್ಧಾರ ಬಗ್ಗೆ ಗೊತ್ತಿರಲಿಲ್ಲ ಎಂದು ಸರಕಾರ ಮತ್ತು ಆಯೋಗದಲ್ಲಿಯ ಅನೇಕ ಮೂಲಗಳು ತಿಳಿಸಿದವು.
ಈ ಬೆಳವಣಿಗೆಯು ಚುನಾವಣಾ ಆಯೋಗದಲ್ಲಿಯ ಅಧಿಕಾರಿಗಳಿಗೆ 2020, ಆ.18ರಂದು ಚುನಾವಣಾ ಆಯುಕ್ತ ಅಶೋಕ ಲವಾಸಾ ಅವರ ದಿಢೀರ್ ರಾಜೀನಾಮೆಗೆ ಕಾರಣವಾಗಿದ್ದ ಸಂದರ್ಭಗಳನ್ನು ನೆನಪಿಸಿದೆ. ಲವಾಸಾರ ರಾಜೀನಾಮೆಯು 13 ದಿನಗಳ ಬಳಿಕ ಆ.31ರಂದು ಅಂಗೀಕಾರಗೊಂಡಿದ್ದರೆ ಗೋಯೆಲ್ ರಾಜೀನಾಮೆಯು ತಕ್ಷಣವೇ ಅಂಗೀಕಾರಗೊಂಡಿದೆ.
ಚುನಾವಣಾ ಆಯೋಗದಿಂದ ನಿರ್ಗಮನದ ಬಳಿಕ ಲವಾಸಾರನ್ನು ಏಶ್ಯನ್ ಅಭಿವೃದ್ಧಿ ಬ್ಯಾಂಕಿಗೆ ನಿಯೋಜಿಸಲಾಗಿತ್ತು.
ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳುವ ಮುನ್ನ ಗೋಯೆಲ್ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಹಾಗೂ ಸಂಸ್ಕೃತಿ ಸಚಿವಾಲಯ ಮತ್ತು ಭಾರೀ ಕೈಗಾರಿಕೆಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೂವರು ಸದಸ್ಯರನ್ನು ಹೊಂದಿರುವ ಚುನಾವಣಾ ಆಯೋಗದಲ್ಲಿ ಕಳೆದ ತಿಂಗಳು ಅನೂಪಚಂದ್ರ ಪಾಂಡೆ ಅವರ ಅಧಿಕಾರಾವಧಿ ಅಂತ್ಯಗೊಂಡ ಬಳಿಕ ಈಗಾಗಲೇ ಒಂದು ಹುದ್ದೆ ಖಾಲಿಯಿತ್ತು. ಈಗ ಗೋಯೆಲ್ ಅವರ ರಾಜೀನಾಮೆಯಿಂದಾಗಿ ಕುಮಾರ್ ಓರ್ವರೇ ಆಯೋಗದಲ್ಲಿ ಉಳಿದುಕೊಂಡಿದ್ದಾರೆ.
ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಖಾಲಿ ಇರುವ ಇಬ್ಬರು ಆಯುಕ್ತರ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರವು ತ್ವರಿತವಾಗಿ ಕಾರ್ಯಾಚರಿಸಬೇಕಿದೆ. ಪ್ರಧಾನಿ ನೇತೃತ್ವದ ಸಮಿತಿಯಿಂದ ಅಂತಿಮ ಆಯ್ಕೆಯನ್ನು ಆಧರಿಸಿ ರಾಷ್ಟ್ರಪತಿಗಳು ನೂತನ ನೇಮಕಗಳನ್ನು ಮಾಡುತ್ತಾರೆ.