ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಪರ್ಯಾಯ ಡಿಜಿಟಲ್ ಕೆವೈಸಿ ಪ್ರಕ್ರಿಯೆ ಕೋರಿ ಅರ್ಜಿ | ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಆ್ಯಸಿಡ್ ದಾಳಿ ಸಂತ್ರಸ್ತರು ಹಾಗೂ ಶಾಶ್ವತ ಕಣ್ಣಿನ ಹಾನಿಗೆ ತುತ್ತಾಗಿರುವವರಿಗೆ ಪರ್ಯಾಯ ಡಿಜಿಟಲ್ ಕೆವೈಸಿ (ನಿಮ್ಮ ಗ್ರಾಹಕರನ್ನು ಅರಿಯಿರಿ) ಪ್ರಕ್ರಿಯೆಗೆ ಅವಕಾಶ ಒದಗಿಸಬೇಕು ಎಂದು ಸಲ್ಲಿಕೆಯಾಗಿರುವ ಅರ್ಜಿಯ ಸಂಬಂಧ ಕೇಂದ್ರ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಇನ್ನಿತರರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಒಂಬತ್ತು ಮಂದಿ ಆ್ಯಸಿಡ್ ದಾಳಿ ಸಂತ್ರಸ್ತರು ಸಲ್ಲಿಸಿರುವ ಅರ್ಜಿಯನ್ನು ಪ್ರಮುಖ ವಿಷಯ ಎಂದು ವ್ಯಾಖ್ಯಾನಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾರನ್ನು ಒಳಗೊಂಡ ನ್ಯಾಯಪೀಠವು, ಕೇಂದ್ರ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕ್, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಇನ್ನಿತರರಿಗೆ ಈ ಸಂಬಂಧ ನೋಟಿಸ್ ಜಾರಿಗೊಳಿಸಿತು.
“ನಾವು ನೋಟಿಸ್ ಜಾರಿಗೊಳಿಸುತ್ತೇವೆ. ಇದು ಪ್ರಮುಖ ವಿಷಯವಾಗಿದ್ದು, ನಾವು ಇದರ ವಿಚಾರಣೆ ನಡೆಸುತ್ತೇವೆ” ಎಂದು ನ್ಯಾಯಪೀಠ ಹೇಳಿತು.
ಆ್ಯಸಿಡ್ ದಾಳಿ ಸಂತ್ರಸ್ತೆಯಾದ ಹೋರಾಟಗಾರ್ತಿ ಪ್ರಗ್ಯಾ ಪ್ರಸೂನ್ ಹಾಗೂ ಇನ್ನಿತರರು, ಕಣ್ಣಿನ ಹಾನಿಗೊಳಗಾಗಿರುವ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಪರ್ಯಾಯ ಡಿಜಿಟಲ್ ಕೆವೈಸಿ ಪ್ರಕ್ರಿಯೆಗೆ ಅವಕಾಶ ಒದಗಿಸಬೇಕು ಎಂದು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.