ನಿರ್ಜಲೀಕರಣಕ್ಕೊಳಗಾಗಿದ್ದ ಎ.ಆರ್. ರೆಹಮಾನ್ ಆಸ್ಪತ್ರೆಯಿಂದ ಬಿಡುಗಡೆ

ಎ. ಆರ್. ರೆಹಮಾನ್ (Photo: PTI)
ಚೆನ್ನೈ: ನಿರ್ಜಲೀಕರಣಕ್ಕೊಳಗಾಗಿ ನಗರದ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಆಸ್ಪತ್ರೆಯಿಂದ ಬಿಡುಗಡೆಗೊಂಡು, ಮನೆಗೆ ಮರಳಿದ್ದಾರೆ. ಅವರೀಗ ಆರೋಗ್ಯವಾಗಿದ್ದಾರೆ ಎಂದು ರವಿವಾರ ಕುಟುಂಬದ ಮೂಲಗಳು ತಿಳಿಸಿವೆ.
58 ವರ್ಷದ ಎ.ಆರ್.ರೆಹಮಾನ್ ಅವರನ್ನು ರವಿವಾರ ಮುಂಜಾನೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರ ವ್ಯವಸ್ಥಾಪಕ ಸೆಂಥಿಲ್ ವೇಲನ್ ತಿಳಿಸಿದ್ದಾರೆ. ಎ.ಆರ್.ರೆಹಮಾನ್ ಈ ಹಿಂದೆ ಕತ್ತು ನೋವಿಗೂ ಒಳಗಾಗಿದ್ದರು ಎಂದೂ ಅವರು ಹೇಳಿದ್ದಾರೆ.
ಎದೆ ನೋವು ಕಾಣಿಸಿಕೊಂಡಿದ್ದರಿಂದ ಎ.ಆರ್.ರೆಹಮಾನ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವರದಿಗಳನ್ನು ಅವರ ಸಹೋದರಿ ರೈಹಾನಾ ತಳ್ಳಿ ಹಾಕಿದರು.
“ಅವರು ನಿರ್ಜಲೀಕರಣ ಹಾಗೂ ಉದರ ಸಂಬಂಧಿ ತೊಂದರೆಗೊಳಗಾಗಿದ್ದರು” ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಎರಡು ಬಾರಿಯ ಆಸ್ಕರ್ ಪ್ರಶಸ್ತಿ ಹಾಗೂ ಒಮ್ಮೆ ಗ್ರಾಮಿ ಪ್ರಶಸ್ತಿಗೆ ಭಾಜನರಾಗಿರುವ ಎ.ಆರ್.ರೆಹಮಾನ್, ‘ರೋಜಾ’, ‘ದಿಲ್ ಸೆ’, ‘ಎಂದಿರನ್’ ಹಾಗೂ ‘ಸ್ಲಮ್ ಮಿಲಿಯನೇರ್’ ಚಿತ್ರಗಳಿಗೆ ಸಂಯೋಜಿಸಿದ ಸಂಗೀತದಿಂದ ವಿಶ್ವವಿಖ್ಯಾತ ಸಂಗೀತ ನಿರ್ದೇಶಕರೆನಿಸಿದ್ದಾರೆ.