ಚುನಾವಣೆಗಳಲ್ಲಿ ಅವಿರೋಧ ಆಯ್ಕೆಗಳು ಅಸಾಂವಿಧಾನಿಕವೇ?: ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಒಂದು ವೇಳೆ ಚುನಾವಣಾ ಕಣದಲ್ಲಿ ಒಬ್ಬರೇ ಅಭ್ಯರ್ಥಿಯಿದ್ದರೆ ಚುನಾವಣೆಯನ್ನು ನಡೆಸದೆ ಅವಿರೋಧ ಆಯ್ಕೆಯ ಬದಲು ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆಂದು ಘೋಷಿಸಲು ಒಟ್ಟು ಚಲಾಯಿಸಲಾದ ಮತಗಳಲ್ಲಿ ಕನಿಷ್ಠ ಶೇಕಡಾವಾರು ಪಾಲು ಪಡೆಯುವುದನ್ನು ಅಗತ್ಯವಾಗಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಸಲಹೆ ನೀಡಿದೆ.
ಎ.24ರಂದು ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ 1951ರ ಜನ ಪ್ರಾತಿನಿಧ್ಯ ಕಾಯ್ದೆಯ ಕಲಂ 53(2)ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕಾನೂನು ಸಂಶೋಧನಾ ಚಿಂತನ ಚಾವಡಿ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಎನ್.ಕೋಟೀಶ್ವರ ಸಿಂಗ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ ಭರ್ತಿ ಮಾಡಬೇಕಾದ ಸ್ಥಾನಗಳ ಸಂಖ್ಯೆಗೆ ಸಮವಾಗಿದ್ದರೆ ಚುನಾವಣಾಧಿಕಾರಿಯು ಅಂತಹ ಎಲ್ಲ ಅಭ್ಯರ್ಥಿಗಳು ಆ ಸ್ಥಾನಗಳಿಗೆ ಆಯ್ಕೆಯಾಗಿದ್ದಾರೆ ಎಂದು ತಕ್ಷಣ ಘೋಷಿಸಬೇಕು ಎಂದು ಈ ಕಲಂ ಹೇಳುತ್ತದೆ.
2024 ಆಗಸ್ಟ್ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಕಣದಲ್ಲಿ ಏಕೈಕ ಅಭ್ಯರ್ಥಿಯಿದ್ದಾಗ ಚುನಾವಣೆಯನ್ನು ನಡೆಸದಿರುವುದು ಮತದಾರರು ‘ಮೇಲಿನ ಯಾರೂ ಅಲ್ಲ(ನೋಟಾ)’ ಆಯ್ಕೆಯನ್ನು ಆಯ್ದುಕೊಳ್ಳುವುದನ್ನು ತಡೆಯುತ್ತದೆ ಮತ್ತು ಇದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ವಾದಿಸಲಾಗಿದೆ.
ಸಂವಿಧಾನದ 19(1)(ಎ) ವಿಧಿಯಡಿ ನೇರ ಚುನಾವಣೆಗಳಲ್ಲಿ ನೋಟಾ ಆಯ್ಕೆ ಮಾಡಿಕೊಳ್ಳುವ ಮೂಲಕ ನಕಾರಾತ್ಮಕ ಮತವನ್ನು ಚಲಾಯಿಸುವ ಹಕ್ಕನ್ನು ರಕ್ಷಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು 2013ರಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ವಿರುದ್ಧ ಭಾರತ ಒಕ್ಕೂಟ ಪ್ರಕರಣದಲ್ಲಿ ನೀಡಿರುವ ತೀರ್ಪನ್ನು ಅರ್ಜಿಯು ಉಲ್ಲೇಖಿಸಿದೆ.
1951ರಿಂದ 2024ರವರೆಗೆ 26 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು ಎಂದು ಈ ಅವಧಿಯಲ್ಲಿನ ಚುನಾವಣಾ ಆಯೋಗದ ಅಂಕಿಅಂಶಗಳನ್ನು ಉಲ್ಲೇಖಿಸಿ ಹೇಳಿರುವ ಅರ್ಜಿಯು, ಇದರಿಂದಾಗಿ ಈ ಚುನಾವಣೆಗಳಲ್ಲಿ 82 ಲಕ್ಷಕ್ಕೂ ಅಧಿಕ ಮತದಾರರು ತಮ್ಮ ಮತದಾನದ ಅವಕಾಶದಿಂದ ವಂಚಿತರಾಗಿದ್ದರು ಎಂದು ಬೆಟ್ಟು ಮಾಡಿದೆ. ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಅವಿರೋಧ ಆಯ್ಕೆಗಳು ಹೆಚ್ಚು ಸಾಮಾನ್ಯವಾಗಿವೆ ಎಂದು ಅದು ಹೇಳಿದೆ.
ಮತದಾರರ ಬೆಂಬಲವಿಲ್ಲದೆ ಅಭ್ಯರ್ಥಿಯ ಸಂಸತ್ ಪ್ರವೇಶವನ್ನು ಅನುಮತಿಸುವ ಕಲಂ 53(2)ರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ ಪೀಠದ ನೇತೃತ್ವ ವಹಿಸಿದ್ದ ನ್ಯಾ.ಸೂರ್ಯಕಾಂತ ಅವರು, ಏಕೈಕ ಅಭ್ಯರ್ಥಿ ಕಣದಲ್ಲಿದ್ದರೂ ಕನಿಷ್ಠ ಶೇ.10 ಅಥವಾ ಶೇ.15ರಷ್ಟು ಮತಗಳನ್ನು ಪಡೆದಾಗ ಮಾತ್ರ ನಿಮ್ಮನ್ನು ಚುನಾಯಿತರೆಂದು ಘೋಷಿಸಲಾಗುತ್ತದೆ ಎಂದು ಹೇಳುವುದು ಸ್ವಾಗತಾರ್ಹ ಮತ್ತು ಪ್ರಗತಿಪರ ಕ್ರಮವಲ್ಲವೇ ಎಂದು ಪ್ರಶ್ನಿಸಿದರು.
ಈ ಸಲಹೆಯನ್ನು ಪರಿಶೀಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದ ಅವರು, ‘ಇಂದು ನಿಮಗೆ ಯಾವುದೇ ಸಮಸ್ಯೆಯಿಲ್ಲ, ಆದರೆ ನೀವು ಏನಾದರೊಂದು ನಿಯಮವನ್ನು ರೂಪಿಸಿದರೆ ನಾಳೆ ಸಮಸ್ಯೆ ಉದ್ಭವಿಸಿದಾಗ ಅದನ್ನು ಬಗೆಹರಿಸಲು ನಿಮ್ಮ ಬಳಿ ಅಸ್ತ್ರವೊಂದು ಸಿದ್ಧವಿರುತ್ತದೆ. ಆ ಅಸ್ತ್ರ ಯಾವುದಾಗಬಹುದು? ಸಂಸತ್ತು ನಿರ್ಧರಿಸಿದರೆ ಅದು ನಿಮ್ಮ ಬುದ್ಧಿವಂತಿಕೆಯಾಗಿರುತ್ತದೆ. ಆದರೆ ಶೇ.5ರಷ್ಟೂ ಮತಗಳನ್ನು ಪಡೆದಿರದ ವ್ಯಕ್ತಿಯನ್ನು ಪೂರ್ವನಿಯೋಜಿತವಾಗಿ ಸಂಸತ್ತು ಪ್ರವೇಶಿಸಲು ನಾವೇಕೆ ಅವಕಾಶ ನೀಡಬೇಕು? ನೀವು ಜನರ ಇಚ್ಛೆಯನ್ನು ಪ್ರತಿನಿಧಿಸುವುದರಿಂದ ನೀವು ಆ ಬಗ್ಗೆ ಆಲೋಚನೆ ಮಾಡಬಹುದು’ ಎಂದು ಹೇಳಿದರು.
ಅರ್ಜಿಗೆ ಉತ್ತರಿಸಲು ಕೇಂದ್ರ ಸರಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆಯನ್ನು ಜು.24ಕ್ಕೆ ಮುಂದೂಡಿತು.