ಬ್ರೆಝಿಲ್ ಗೆ ಸೋಲುಣಿಸಿ 2024ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಥಾನ ಪಡೆದ ಅರ್ಜೆಂಟೀನ
ಸಾಂದರ್ಭಿಕ ಚಿತ್ರ | Photo: PTI
ಕ್ಯಾರಕಾಸ್ : ತನ್ನ ಪ್ರಾದೇಶಿಕ ಎದುರಾಳಿ ಅರ್ಜೆಂಟೀನ ವಿರುದ್ಧ 0-1 ಗೋಲು ಅಂತರದಿಂದ ಸೋತಿರುವ ಬ್ರೆಝಿಲ್ ಫುಟ್ಬಾಲ್ ತಂಡ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ತನ್ನ ಚಿನ್ನದ ಪದಕ ಉಳಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದೆ.
ರವಿವಾರ ನಡೆದ ನಿರ್ಣಾಯಕ ದಕ್ಷಿಣ ಅಮೆರಿಕದ ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಜೇವಿಯರ್ ಮಸ್ಕರಾನೊರಿಂದ ತರಬೇತಿ ಪಡೆದಿರುವ ಅಂಡರ್-23 ಅರ್ಜೆಂಟೀನ ತಂಡದ ಪರ ಲುಸಿಯಾನೊ ಗೊಂಡೌ 78ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.
ರಿಯೊ ಡಿ ಜನೈರೊ ಹಾಗೂ ಟೋಕಿಯೊದಲ್ಲಿ ನಡೆದಿರುವ ಒಲಿಂಪಿಕ್ಸ್ ನಲ್ಲಿ ಪುರುಷರ ಫುಟ್ಬಾಲ್ ನಲ್ಲಿ ಬ್ರೆಝಿಲ್ ಚಿನ್ನದ ಪದಕ ಗೆದ್ದುಕೊಂಡಿತ್ತು.
ದಕ್ಷಿಣ ಅಮೆರಿಕದ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯವು ಪ್ಯಾರಿಸ್ ಒಲಿಂಪಿಕ್ಸ್ಗೆ ಎರಡು ಸ್ಥಾನ ಒದಗಿಸಲಿದೆ. ಉಳಿದಿರುವ ಒಂದು ಸ್ಥಾನಕ್ಕಾಗಿ ಪರಾಗ್ವೆ ಹಾಗೂ ವೆನೆಝುವೆಲಾ ನಡುವೆ ಪೈಪೋಟಿ ನಡೆಯಲಿದೆ.
ಅರ್ಜೆಂಟೀನವು ತನ್ನ ಅಂತಿಮ ಗ್ರೂಪ್ ಅಭಿಯಾನವನ್ನು 3 ಪಂದ್ಯಗಳಲ್ಲಿ ಐದು ಅಂಕವನ್ನು ಗಳಿಸುವ ಮೂಲಕ ಅಂತ್ಯಗೊಳಿಸಿದೆ.
ಬ್ರೆಝಿಲ್ ಈ ಹಿಂದೆ 2004ರಲ್ಲಿ ಪುರುಷರ ಫುಟ್ಬಾಲ್ ಒಲಿಂಪಿಕ್ಸ್ ಟೂರ್ನಮೆಂಟ್ ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು.
ಅರ್ಜೆಂಟೀನವು 2004ರ ಅಥೆನ್ಸ್ ಒಲಿಂಪಿಕ್ಸ್ ಹಾಗೂ 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಪುರುಷರ ಫುಟ್ಬಾಲ್ ನಲ್ಲಿ ಚಿನ್ನದ ಪದಕ ಜಯಿಸಿತ್ತು. 2008ರಲ್ಲಿ ಬೀಜಿಂಗ್ ನಲ್ಲಿ ಲಿಯೊನೆಲ್ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನ ಚಿನ್ನ ಜಯಿಸಿತ್ತು.