ಮಹಿಳಾ ಅಧಿಕಾರಿಗಳನ್ನು ಭಡ್ತಿಗೊಳಿಸುವ ಕುರಿತು ಸೇನೆ ತಳೆದಿರುವ ‘ನಿರಂಕುಶ’ ಧೋರಣೆಗೆ ಸುಪ್ರಿಂ ಕೋರ್ಟ್ ತರಾಟೆ
ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಈ ಹಿಂದಿನ ತೀರ್ಪಿನ ಅನುಸಾರ ಸೇನೆಯಲ್ಲಿ ಖಾಯಂ ಆಯೋಗ ಪಡೆದ ಮಹಿಳಾ ಅಧಿಕಾರಿಗಳನ್ನು ಕರ್ನಲ್ ಹುದ್ದೆಗೆ ಭಡ್ತಿಗೊಳಿಸುವಲ್ಲಿ ಭಾರತೀಯ ಸೇನೆ ತಳೆದಿರುವ ‘ನಿರಂಕುಶ’ ಧೋರಣೆಗೆ ಅದನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ Live Law ವರದಿ ಮಾಡಿದೆ.
ಸೇನೆ ಅನುಸರಿಸುತ್ತಿರುವ ಪದ್ಧತಿಗಳು ತಮ್ಮ ಪುರುಷ ಸಹೋದ್ಯೋಗಿಗಳಂತೆಯೇ ಸಮಾನ ಪ್ರಯೋಜನಗಳನ್ನು ಪಡೆಯಬೇಕೆಂದು ಹೋರಾಡುತ್ತಿರುವ ಮಹಿಳಾ ಅಧಿಕಾರಿಗಳಿಗೆ ಅನ್ಯಾಯವೆಸಗಿದಂತೆ ಎಂದು ಸುಪ್ರೀಂ ಹೇಳಿದೆ.
ತನ್ನ ಫೆಬ್ರವರಿ 2020 ತೀರ್ಪಿನಲ್ಲಿ ಭಾರತೀಯ ಸೇನೆಯ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ಒದಗಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿತ್ತು. ವಿವಿಧ ಕಾರಣಗಳನ್ನು ಮುಂದೊಡ್ಡಿ ತಮಗೆ ಖಾಯಂ ಆಯೋಗಗಳನ್ನು ನಿರಾಕರಿಸಿರುವುದನ್ನು ಪ್ರಶ್ನಿಸಿ 72 ಮಹಿಳಾ ಅಧಿಕಾರಿಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ ನಂತರ ಈ ತೀರ್ಪು ಬಂದಿತ್ತು.
ಖಾಯಂ ಆಯೋಗವೆಂದರೆ ನಿವೃತ್ತಿಯ ತನಕ ಸೇನೆಯಲ್ಲಿ ವೃತ್ತಿ ಮುಂದುವರಿಸಬಹುದು. ಆದರೆ ಶಾರ್ಟ್ ಸರ್ವಿಸ್ ಕಮಿಷನ್ ಪ್ರಕಾರ ಸೇವೆಯ ಅವಧಿ 10 ವರ್ಷ ಮಾತ್ರ ಆಗಿದೆ. ಈ 10 ವರ್ಷಗಳ ನಂತರ ಅವರು ಖಾಯಂ ಆಯೋಗಕ್ಕೆ ಮನವಿ ಮಾಡಬಹುದು. ಆಯ್ಕೆಯಾದಲ್ಲಿ ಮತ್ತೆ ನಾಲ್ಕು ವರ್ಷ ವಿಸ್ತರಣೆ ದೊರೆಯಲಿದೆ.
2020 ತೀರ್ಪಿನ ಅನುಸಾರ 11 ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ನೀಡಲು ವಿಫಲವಾದರೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ನವೆಂಬರ್ 2021ರಲ್ಲಿ ಸುಪ್ರೀಂ ಕೋರ್ಟ್ ಸೇನೆಗೆ ಎಚ್ಚರಿಸಿತ್ತು.
ಈಗಿನ ಅರ್ಜಿಯಲ್ಲಿ ಮಹಿಳಾ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಮಾರ್ಚ್ 2021 ತೀರ್ಪಿನ ಹೊರತಾಗಿಯೂ ವೀಶೇಷ ಆಯ್ಕೆ ಮಂಡಳಿ 18 ತಿಂಗಳಿಂದ ಸಭೆ ಸೇರಿಲ್ಲ ಎಂದು ದೂರಿದ್ದರು ಹಾಗೂ ಇನ್ನೂ ಕೆಲ ತಾರತಮ್ಯಕಾರಿ ನಿಲುವುಗಳ ಬಗ್ಗೆ ದೂರಿದ್ದರು.
ಭಡ್ತಿಗಾಗಿ ಕಾದಿರುವ ಸುಮಾರು 136 ಮಹಿಳಾ ಅಧಿಕಾರಿಗಳ ಪ್ರಕರಣಗಳನ್ನು ಮರುಪರಿಗಣಿಸಲು 14 ದಿನಗಳೊಳಗೆ ಕ್ರಮಕೈಗೊಳ್ಳಬೇಕೆಂದು ಸೇನೆಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.