ಜಮ್ಮು ಕಾಶ್ಮೀರ | ಪೂಂಚ್ ನಾಗರಿಕರಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈದ ಸೇನಾ ಅಧಿಕಾರಿಗಳು: The Caravan Magazine ತನಿಖಾ ವರದಿ
"ಶೌಕತ್ ಜೀವಂತವಾಗಿದ್ದಾನಾ ಎಂದು ನೋಡಲು ಎದೆಯ ಮೇಲೆ ಹಾರಲು ಪ್ರಾರಂಭಿಸಿದರು"

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಉಗ್ರಗಾಮಿಗಳ ಹೊಂಚುದಾಳಿಯ ನಂತರ ಇಬ್ಬರು ಉನ್ನತ ಸೇನಾ ಜನರಲ್ಗಳ ನೇತೃತ್ವದಲ್ಲಿ ನಾಗರಿಕರ ವಿಚಾರಣೆ ನಡೆಸಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ ಎಂದು The Caravan Magazine ನಡೆಸಿದ ವಿವರವಾದ ತನಿಖಾ ವರದಿ ಬಹಿರಂಗಪಡಿಸಿದೆ.
2023 ರ ಡಿಸೆಂಬರ್ 21 ಮತ್ತು 22ರ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದೆ. 'ಆಪರೇಷನ್ ಪಂಗೈ' ಎಂಬ ಹೆಸರಿನಲ್ಲಿ ನಡೆದ ಈ ಕಾರ್ಯಚರಣೆಯು ಉಗ್ರರನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿತ್ತು ಎನ್ನಲಾಗಿದೆ. ಅದರೆ ಅದು ಸಾಮೂಹಿಕ ಚಿತ್ರಹಿಂಸೆ ನೀಡುವ ಕಾರ್ಯಚರಣೆಯಾಗಿ ಮಾರ್ಪಟ್ಟಿತು!
“ಈ ವರದಿಯಲ್ಲಿ, ಡಿಸೆಂಬರ್ 22 ರಂದು ಪ್ರಕ್ಷುಬ್ಧ ಜಮ್ಮು ಪ್ರದೇಶದಲ್ಲಿ ನಡೆದ ಸಂಘಟಿತ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು 25 ನಾಗರಿಕರನ್ನು ಚಿತ್ರಹಿಂಸೆ ನೀಡಿ 3 ಜನರನ್ನು ಹತ್ಯೆ ಮಾಡಿದೆ ಎಂಬುದಕ್ಕೆ ನಾವು ದೃಢವಾದ ಪುರಾವೆಗಳನ್ನು ಕಂಡುಕೊಂಡಿದ್ದೇವೆ” ಎಂದು ತನಿಖಾ ವರದಿ ಬರೆದ ಹಿರಿಯ ಪತ್ರಕರ್ತೆ ಜತೀಂದರ್ ಕೌರ್ ಹೇಳಿದ್ದಾರೆ.
"ಮೂರು ಪ್ರತ್ಯೇಕ ಸೇನಾ ನೆಲೆಗಳಲ್ಲಿ ಮೂರು ವಿಭಿನ್ನ ಕಂಪೆನಿಗಳಿಗೆ ಹಿರಿಯ ಮಿಲಿಟರಿ ಅಧಿಕಾರಿಗಳು ಚಿತ್ರಹಿಂಸೆ ನೀಡಲು ನಿರ್ದೇಶನಗಳನ್ನು ನೀಡುತ್ತಿದ್ದಾರೆಂದು ವೀಡಿಯೊ ಪುರಾವೆಗಳಿವೆ" ಎಂದು ಅವರು X ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಉಗ್ರಗಾಮಿಗಳು ಸೇನಾ ಬೆಂಗಾವಲು ಪಡೆಯ ಮೇಲೆ ದಾಳಿ ಮಾಡಿ ನಾಲ್ವರು ಸೈನಿಕರನ್ನು ಕೊಂದು ಇಬ್ಬರು ಸೈನಿಕರ ಶಿರಚ್ಛೇದ ಮಾಡಿದ ನಂತರ, ಲೆಫ್ಟಿನೆಂಟ್ ಜನರಲ್ ಸಂದೀಪ್ ಜೈನ್ ಮತ್ತು ಮೇಜರ್ ಜನರಲ್ ಮನೀಷ್ ಗುಪ್ತಾ ಸೇರಿದಂತೆ ಇತರರು ಡೇರಾ ಕಿ ಗಾಲಿಯಲ್ಲಿರುವ ಎಕೋ ಕಂಪನಿ ಬೇಸ್ನಿಂದ ಈ ಕಾರ್ಯಾಚರಣೆಯನ್ನು ಸಂಘಟಿಸಿದರು ಎನ್ನಲಾಗಿದೆ.
ಈ ಕಾರ್ಯಾಚರಣೆಯಂತೆ ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಾದ್ಯಂತ ಗುಜ್ಜರ್ ಸಮುದಾಯದ 26 ಜನರನ್ನು ಬಂಧಿಸಲಾಯಿತು. ಅಲ್ಲಿಂದ ಅವರನ್ನು ಮೂರು ಸೇನಾ ಠಾಣೆಗಳಿಗೆ ಕರೆದೊಯ್ದು ತೀವ್ರ ಚಿತ್ರಹಿಂಸೆ ನೀಡಲಾಯಿತು ಎಂದು ವರದಿಯು ಉಲ್ಲೇಖಿಸಿದೆ.
ಬಂಧಿತ ನಾಗರಿಕರಿಗೆ ಕ್ರೂರವಾಗಿ ಥಳಿಸಿ, ಮೆಣಸಿನ ಪುಡಿ ಬಳಸಿ, ನೀರಿನಲ್ಲಿ ಮುಳುಗಿಸಿ, ವಿದ್ಯುತ್ ಆಘಾತ ನೀಡಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ಪರಿಣಾಮವಾಗಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಅವರು ವಿವರಿಸಿದ್ದಾರೆ. ಚಿತ್ರಹಿಂಸೆಯ ವೀಡಿಯೊಗಳು ವೈರಲಾಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹತ್ಯೆಯಾದ ಮೂವರು ನಾಗರಿಕರನ್ನು ಶೌಕತ್ ಹುಸೇನ್, ಸಫೀರ್ ಅಹ್ಮದ್ ಮತ್ತು ಶಬೀರ್ ಹುಸೇನ್ ಎಂದು ಗುರುತಿಸಲಾಗಿದೆ.
"ಗುಪ್ತಚರ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಸಫೀರ್ ಅವರನ್ನು ರಾಜೌರಿಯಲ್ಲಿ ಭಾರತೀಯ ಸೇನೆಯ 48 RR ಚಿತ್ರಹಿಂಸೆ ನೀಡಿ ಹತ್ಯೆ ಮಾಡಿತು. ಸಫೀರ್ ಅವರ ತಾಯಿ ಜೈನಾಬ್ ಮೃತದೇಹವನ್ನು ನೋಡಿ ಮೂರ್ಛೆ ಹೋದರು. ಸೇನೆಯು ಆತುರದಿಂದ ನಡೆಸಿದ ಮರಣೋತ್ತರ ಪರೀಕ್ಷೆಯಿಂದ ಹಣೆಯ ಮೇಲೆ ಆಳವಾದ ಗಾಯವಾಗಿತ್ತು. ಮೃತ ದೇಹದಲ್ಲಿ ಅನೇಕ ಕಡೆ ಮುರಿತದ ಗಾಯಗಳಿತ್ತು. ಕುತ್ತಿಗೆ ಮುರಿದಿತ್ತು.ಅದನ್ನು ನೋಡಿದ್ದ ಸಫೀರ್ ಅವರ ತಾಯಿ ಮುಂದಿನ ಕೆಲವು ದಿನಗಳಲ್ಲಿ ಪದೇ ಪದೇ ಮೂರ್ಛೆ ಹೋಗುತ್ತಿದ್ದರು," ಎಂದು ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಜತೀಂದರ್ ಕೌರ್ ಹೇಳಿದ್ದಾರೆ.
"ಅವರು ಯಾವುದೇ ಪ್ರಶ್ನೆಗಳನ್ನು ಕೇಳದೆ ತಕ್ಷಣ ನಮ್ಮ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ನಾನು ಪ್ರಜ್ಞೆ ಕಳೆದುಕೊಂಡೆ. ನಾವು ಅಲ್ಲಿಗೆ ಹೋದಾಗ, ಚಿತ್ರಹಿಂಸೆಗೆ ಒಳಗಾದ ಶೌಕತ್, ಸಫೀರ್, ಶಬೀರ್ ಮತ್ತು ರಿಯಾಜ್ ಅಲ್ಲಿಯೇ ಮಲಗಿದ್ದರು," ಎಂದು ಬದುಕುಳಿದ ಫಾರೂಕ್ The Caravan Magazineಗೆ ತಿಳಿಸಿದರು.
"ಅವರು ಶೌಕತ್ನನ್ನು ನೆಲದ ಮೇಲೆ ಎಸೆದರು. ಈ ಮೂವರು ಸೈನಿಕರು ಆತ ಜೀವಂತವಾಗಿದ್ದಾನಾ ಎಂದು ನೋಡಲು ಆತನ ಎದೆಯ ಮೇಲೆ ಹಾರಲು ಪ್ರಾರಂಭಿಸಿದರು" ಎಂದು ಚಿತ್ರಹಿಂಸೆಯ ನಂತರದ ಘಟನೆಯನ್ನು, ಪ್ರತ್ಯಕ್ಷದರ್ಶಿ ಸ್ಥಳೀಯ ನಿವಾಸಿ ಶೆಹ್ನಾಝ್ ಅಖ್ತರ್ ವಿವರಿಸಿದರು.
"ಅವರ ದೇಹವು ಕಪ್ಪು ಬಣ್ಣಕ್ಕೆ ತಿರುಗಿತ್ತು ಮತ್ತು ಅವರ ಕೈ ಮತ್ತು ಕಾಲ್ಬೆರಳುಗಳ ಉಗುರುಗಳನ್ನು ಕಿತ್ತು ತೆಗೆಯಲಾಗಿತ್ತು. ನನ್ನ ಮಗುವಿಗೆ ಕ್ರೂರವಾಗಿ ಚಿತ್ರ ಹಿಂಸೆ ನೀಡಲಾಗುತ್ತು", ಎಂದು ಶೌಕತ್ನ ತಂದೆ ನಝೀರ್ ಹುಸೇನ್, ತಮ್ಮ ಮಗನ ದೇಹವನ್ನು ಹಿಂತಿರುಗಿಸಿದ ಸ್ಥಿತಿಯನ್ನು ವಿವರಿಸುತ್ತಾ ಹೇಳಿದರು.
ತನಿಖಾ ವರದಿಯು ಸೈನಿಕರ ರಾಕ್ಷಸೀ ಕೃತ್ಯಗಳ ಹಿಂದೆ ಹಿರಿಯ ಅಧಿಕಾರಿಗಳ ನೇರ ಒಳಗೊಳ್ಳುವಿಕೆಯನ್ನು ಬೊಟ್ಟು ಮಾಡಿದೆ. ವಾಟ್ಸಾಪ್ ಸಂದೇಶಗಳು ಮತ್ತು ಸೇನಾ ವಿಚಾರಣೆಗಳಿಂದ ಬಂದ ದಾಖಲೆಗಳು ಅದಕ್ಕೆ ಪೂರಕವಾಗಿದೆ ಎಂದು ಹೇಳುತ್ತದೆ.
ಗಂಭೀರ ಆರೋಪಗಳ ಹೊರತಾಗಿಯೂ, ಲೆಫ್ಟಿನೆಂಟ್ ಜನರಲ್ ಸಂದೀಪ್ ಜೈನ್ ಮತ್ತು ಮೇಜರ್ ಜನರಲ್ ಮನೀಷ್ ಗುಪ್ತಾ ಇಬ್ಬರೂ ಮಿಲಿಟರಿ ತನಿಖಾ ನ್ಯಾಯಾಲಯ ಅಥವಾ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯಿಂದ ಯಾವುದೇ ಗಮನಾರ್ಹ ಪರಿಣಾಮಗಳನ್ನು ಎದುರಿಸಿಲ್ಲ. ಬದಲಾಗಿ, ಕೆಳ ಶ್ರೇಣಿಯ ಅಧಿಕಾರಿಗಳಿಗೆ ಕಡಿಮೆ ಪ್ರಮಾಣದಲ್ಲಿ ಶಿಕ್ಷೆಗಳನ್ನು ನೀಡಲಾಗಿದೆ. ಆದರೆ ನಾಗರಿಕರಿಗೆ ಆಗಿರುವ ಅನ್ಯಾಯದ ಕುರಿತು ಇದುವರೆಗೂ ಯಾವುದೇ ಕ್ರಮಗಳಾಗಿಲ್ಲ. ಹತ್ಯೆಯಾಗಿರುವ ನಾಗರಿಕರನ್ನು ಎಫ್ಐಆರ್ ನಲ್ಲಿ "ಅಪರಿಚಿತ ವ್ಯಕ್ತಿ 1" ಎಂದು ಅಸ್ಪಷ್ಟವಾಗಿ ಹೆಸರಿಸಲಾಗಿದೆ.
ಮೃತರ ಕುಟುಂಬಗಳು ಸೈನ್ಯದಿಂದ ಪರಿಹಾರದ ಹಣ ಎಂದು ಒಂದಿಷ್ಟು ಪರಿಹಾರವನ್ನು ಪಡೆದಿದ್ದಾರೆ. ಜೊತೆಗೆ ಕೆಲವು ಸರ್ಕಾರಿ ಸೌಲಭ್ಯಗಳೂ ಸಿಕ್ಕಿದೆ. ಆದರೆ ನ್ಯಾಯವು ಇನ್ನೂ ಮರೀಚಿಕೆಯಾಗಿ ಉಳಿದಿದೆ.
ಈಗ ಹೊರ ಬಂದಿರುವ ಆಘಾತಕಾರಿ ಘಟನೆಯು ಪೂಂಚ್ನಂತಹ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿನ ದಂಗೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಭಾರತೀಯ ಸೇನೆಯೊಳಗಿನ ಹೊಣೆಗಾರಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
In this story we have found solid evidence that the #IndianArmy tortured 25 civilians and killed 3 in a coordinated operation in the restive Jammu region on 22 December.#Kashmir #poonch #rajouri https://t.co/szOq0xexF7
— Jatinder Kaur Tur (@jatinder_tur) February 1, 2024