ಒಡಿಶಾ| ಸೇನಾಧಿಕಾರಿಯ ಭಾವಿ ಪತ್ನಿ ಮೇಲೆ ದೌರ್ಜನ್ಯ ಆರೋಪ: ಐವರು ಪೊಲೀಸರು ಅಮಾನತು

Photo credit: NDTV
ಒಡಿಶಾ: ಭುವನೇಶ್ವರದಲ್ಲಿ ಪೊಲೀಸರ ಮೇಲೆ ಹಲ್ಲೆ ಮತ್ತು ಪೊಲೀಸ್ ಠಾಣೆಯ ಪೀಠೋಪಕರಣಗಳ ಧ್ವಂಸ ಆರೋಪದ ಮೇಲೆ ಕಳೆದ ವಾರ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದ ಸೇನಾ ಅಧಿಕಾರಿಯೋರ್ವರ ಭಾವಿ ಪತ್ನಿ ಇದೀಗ ಪೊಲೀಸರ ವಿರುದ್ಧವೇ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಕ್ರಮ ಬಂಧನದ ಆರೋಪ ಮಾಡಿದ್ದು, ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಇನ್ಸ್ ಪೆಕ್ಟರ್ ಶ್ರೇಣಿಯ ಅಧಿಕಾರಿ ಸೇರಿದಂತೆ ಐವರು ಪೊಲೀಸರನ್ನು ಶಿಸ್ತಿನ ಪ್ರಕ್ರಿಯೆಯ ಭಾಗವಾಗಿ ಅಮಾನತುಗೊಳಿಸಲಾಗಿದೆ ಎಂದು ಒಡಿಶಾ ಪೊಲೀಸ್ ಉನ್ನತ ಮೂಲಗಳು ತಿಳಿಸಿದೆ.
ಪೊಲೀಸ್ ಮಹಾನಿರ್ದೇಶಕ ವೈ.ಬಿ. ಖುರಾನಿಯಾ ಅವರ ನಿರ್ದೇಶನದ ಮೇರೆಗೆ ಚಂಡಕಾ ಪೊಲೀಸ್ ಠಾಣೆಯಲ್ಲಿ ಗುರುವಾರ ಈ ಕುರಿತು ದೂರು ದಾಖಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದು, ಈ ಕುರಿತು ಪೊಲೀಸರಿಂದ ವರದಿಯನ್ನು ಕೇಳಿದೆ.
ರವಿವಾರ ತಡರಾತ್ರಿ ರೆಸ್ಟೋರೆಂಟ್ ಮುಚ್ಚಿದ ಬಳಿಕ ನಾನು ನನ್ನ ಭಾವಿ ಪತಿಯ ಜೊತೆ ಮನೆಗೆ ಹೋಗುತ್ತಿದ್ದಾಗ ಗುಂಪೊಂದು ನಮ್ಮ ಮೇಲೆ ಹಲ್ಲೆ ಮಾಡಿದೆ. ಈ ಬಗ್ಗೆ ಭರತ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದೆವು. ನಾವು ಪೊಲೀಸ್ ಠಾಣೆಗೆ ತಲುಪಿದಾಗ ಅಲ್ಲಿ ಒಬ್ಬ ಮಹಿಳಾ ಕಾನ್ಸ್ಟೆಬಲ್ ಮಾತ್ರ ಸಿವಿಲ್ ಡ್ರೆಸ್ನಲ್ಲಿದ್ದರು. ಅವರು ನಮಗೆ ಸಹಾಯ ಮಾಡಲು ನಿರಾಕರಿಸಿ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ವೇಳೆ ಕೆಲ ಪುರುಷ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಿಖಿತ ಹೇಳಿಕೆ ಕೊಡುವಂತೆ ನಮ್ಮಲ್ಲಿ ಹೇಳಿದ್ದಾರೆ. ಬಳಿಕ ಅವರು ನನ್ನ ಸಂಗಾತಿಯನ್ನು ಲಾಕಪ್ ಗೆ ಹಾಕಿದ್ದಾರೆ. ಆರ್ಮಿ ಅಧಿಕಾರಿಯನ್ನು ಅಕ್ರಮವಾಗಿ ಕಸ್ಟಡಿಯಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ನಾನು ಹೇಳಿದೆ. ಈ ವೇಳೆ ಇಬ್ಬರು ಮಹಿಳಾ ಅಧಿಕಾರಿಗಳು ನನ್ನ ಮೇಲೆ ಹಲ್ಲೆ ನಡೆಸಿ ಕೋಣೆಯೊಳಗೆ ಕೂಡಿ ಹಾಕಿದ್ದಾರೆ ಎಂದು ಸೇನಾಧಿಕಾರಿಯ ಭಾವಿ ಪತ್ನಿ ಆರೋಪಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಪುರುಷ ಅಧಿಕಾರಿಯೊಬ್ಬರು ಬಾಗಿಲು ತೆರೆದಿದ್ದು, ನನಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇನ್ಸ್ಪೆಕ್ಟರ್ ಕೂಡ ಅಶ್ಲೀಲ ಸನ್ನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋಲ್ಕತ್ತಾದ 22 ಸಿಖ್ ರೆಜಿಮೆಂಟ್ ನಲ್ಲಿ ನಿಯೋಜಿಸಲಾಗಿದ್ದ ಅಧಿಕಾರಿ ಮತ್ತು ಆತನ ಭಾವಿ ಪತ್ನಿ ಕುಡಿದು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಪೊಲೀಸ್ ಠಾಣೆಯೊಳಗಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಮೊದಲು ಆರೋಪಿಸಿದ್ದರು.