ಪಾಕಿಸ್ತಾನ ಪರ ಗೂಢಚಾರಿಕೆ ಆರೋಪ: ಸೇನಾ ಸಮವಸ್ತ್ರ ಮಾರಾಟಗಾರ ಆನಂದ್ ರಾಜ್ ಸಿಂಗ್ ಬಂಧನ
ಸಾಂದರ್ಭಿಕ ಚಿತ್ರ
ಜೈಪುರ: ಸೇನೆಯ ವ್ಯೂಹಾತ್ಮಕ ಪ್ರಾಮುಖ್ಯತೆ ಹೊಂದಿರುವ ಮಾಹಿತಿಗಳನ್ನು ಕಲೆ ಹಾಕಿ, ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಮೂವರು ಮಹಿಳಾ ಖಾತೆದಾರರಿಗೆ ಅವನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತಿದ್ದ ಆನಂದ್ ರಾಜ್ ಸಿಂಗ್ (22) ಎಂಬ ವ್ಯಕ್ತಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ರಾಜಸ್ಥಾನದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಗುಪ್ತಚರ) ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ.
ಆರೋಪಿ ಆನಂದ್ ರಾಜ್ ಸಿಂಗ್ ಶ್ರೀ ಗಂಗಾನಗರ್ ನಲ್ಲಿರುವ ಸೂರತ್ ಗಢ್ ನ ಹೊರಗಿರುವ ಸೇನಾ ದಂಡು ಪ್ರದೇಶದ ಹೊರಗೆ ಸೇನಾ ಸಮವಸ್ತ್ರ ಮಾರಾಟ ಮಳಿಗೆಯನ್ನು ನಡೆಸುತ್ತಿದ್ದ. ಆದರೆ, ಕೆಲ ದಿನಗಳ ಹಿಂದೆ ತನ್ನ ಮಳಿಗೆಯನ್ನು ಮುಚ್ಚಿದ್ದ ಆತ, ಬೆಹ್ರೋರ್ ಪ್ರದೇಶದಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಅವಧಿಯಲ್ಲೂ ಕೂಡಾ ಆತ ಪಾಕಿಸ್ತಾನ ಗುಪ್ತಚರ ವಿಭಾಗದ ಮಹಿಳಾ ಖಾತೆದಾರರೊಂದಿಗೆ ಸಂಪರ್ಕದಲ್ಲಿದ್ದ ಎಂದೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸಂಜಯ್ ಅಗರ್ವಾಲ್ ಹೇಳಿದ್ದಾರೆ.
ಆನಂದ್ ಸಿಂಗ್ ರಾಜ್ ತನ್ನ ಮೂಲಗಳ ಮೂಲಕ ಸೇನೆಯ ಗೋಪ್ಯ ಮಾಹಿತಿಗಳನ್ನು ಕಲೆ ಹಾಕಿ, ಅವುಗಳನ್ನು ಪಾಕಿಸ್ತಾನದ ಏಜೆಂಟ್ ಗಳೊಂದಿಗೆ ಹಂಚಿಕೊಳ್ಳುತ್ತಿದ್ದ. ಇಂತಹ ವರ್ಗೀಕೃತ ಮಾಹಿತಿಗಳನ್ನು ರವಾನಿಸಲು ಆರೋಪಿಯು ಪಾಕಿಸ್ತಾನ ಏಜೆಂಟ್ ಗಳಿಂದ ದುಡ್ಡಿಗಾಗಿಯೂ ಆಗ್ರಹಿಸುತ್ತಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಗುಪ್ತಚರ ಸಂಸ್ಥೆಯಿಂದ ನಡೆಸಲಾಗುತ್ತಿರುವ ಬೇಹುಗಾರಿಕೆ ಚಟುವಟಿಕೆಗಳ ಮೇಲೆ ರಾಜಸ್ಥಾನ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗವು ನಿರಂತರವಾಗಿ ಕಣ್ಗಾವಲಿರಿಸಿದೆ ಎಂದು ಅವರು ಹೇಳಿದ್ದಾರೆ.