ಸೇನೆ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಿದೆ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್ | Photo: PTI
ಜಮ್ಮು: ಜಮ್ಮು ಹಾಗೂ ಕಾಶ್ಮೀರದ ಮಣ್ಣಿನಲ್ಲಿ ಬೇರೂರಿರುವ ಭಯೋತ್ಪಾದನೆಯನ್ನು ಸೇನೆ ನಿರ್ಮೂಲನೆ ಮಾಡಲಿದೆ ಎಂಬ ಭರವಸೆ ತನಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ.
‘‘ನನಗೆ ನಿಮ್ಮ ಶೌರ್ಯ ಹಾಗೂ ಸ್ಥೈರ್ಯದ ಬಗ್ಗೆ ನಂಬಿಕೆ ಇದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು. ಈ ಬದ್ದತೆಯೊಂದಿಗೆ ನೀವು ಮುಂದುವರಿಯಬೇಕು. ನೀವು ಜಯ ಸಾಧಿಸುವ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ’’ ಎಂದು ರಾಜೌರಿಯಲ್ಲಿ ಸೇನಾ ಪಡೆಯೊಂದಿಗೆ ಮಾತನಾಡುತ್ತಾ ಅವರು ಹೇಳಿದರು.
ರಾಜನಾಥ್ ಸಿಂಗ್ ಅವರು ಬುಧವಾರ ಜಮ್ಮು ಹಾಗೂ ಕಾಶ್ಮೀರದ ಗಡಿ ಜಿಲ್ಲೆಗಳಾದ ರಾಜೌರಿ ಹಾಗೂ ಪೂಂಛ್ಗೆ ಭೇಟಿ ನೀಡಿದರು ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ಪರಿಸ್ಥಿತಿ ಅವಲೋಕಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೂಂಛ್ನ ಸುರಾನ್ಕೋಟ್ ಪ್ರದೇಶದಲ್ಲಿ ಡಿಸೆಂಬರ್ 21ರಂದು ಯೋಧರ ವಾಹನದ ಮೇಲೆ ಶಂಕಿತ ಭಯೋತ್ಪಾದಕರು ಹೊಂಚು ದಾಳಿ ನಡೆಸಿದ ಪರಿಣಾಮ ನಾಲ್ವರು ಯೋಧರು ಹುತಾತ್ಮರಾದ 1 ವಾರಗಳ ಬಳಿಕ ರಾಜನಾಥ್ ಸಿಂಗ್ ಅವರು ಇಲ್ಲಿಗೆ ಭೇಟಿ ನೀಡಿದ್ದಾರೆ.