ಮೆಟ್ರೊ ಕೇಬಲ್ ಕಳವು ಮಾಡುತ್ತಿದ್ದ 'ಸ್ಪೈಡರ್ ಮ್ಯಾನ್' ಹಾಗೂ ಆತನ ಇಬ್ಬರು ಸಹಚರರ ಬಂಧನ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ದೈನಂದಿನ ಸಾರಿಗೆಯ ಜೀವನಾಡಿಯಾದ ಮೆಟ್ರೊ ರೈಲು ಸೇವೆಯ ಗುಲಾಬಿ ಮಾರ್ಗದಲ್ಲಿ ತಾಮ್ರದ ತಂತಿಗಳನ್ನು ಕದ್ದು, ಮೆಟ್ರೊ ರೈಲು ಸೇವೆಗೆ ಅಡ್ಡಿಯುಂಟು ಮಾಡುತ್ತಿದ್ದ ಸ್ಪೈಡರ್ ಮ್ಯಾನ್ ಎಂದೇ ಕುಖ್ಯಾತನಾಗಿರುವ ಗೋವಿಂದ್ ಕುಮಾರ್ ಹಾಗೂ ಆತನ ಇನ್ನಿಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.
ತಾಮ್ರದ ತಂತಿಗಳನ್ನು ಕದಿಯುವುದರಲ್ಲಿ ನಿಪುಣರಾದ ಗೋವಿಂದ್ ಕುಮಾರ್ ಹಾಗೂ ಆತನ ತಂಡ, ನಿರ್ಮಾಣ ಅವಶೇಷಗಳನ್ನು ತಾತ್ಕಾಲಿಕ ಮೆಟ್ಟಿಲನ್ನಾಗಿ ಬಳಸಿಕೊಂಡು, ಮುಳ್ಳು ತಂತಿಗಳನ್ನು ಕತ್ತರಿಸಿ, ಬೆಲೆಬಾಳುವ ವಿದ್ಯುತ್ ಮೌಲಸೌಕರ್ಯವನ್ನು ಪ್ರವೇಶಿಸುತ್ತಿದ್ದರು. ಆದರೆ, ಇತ್ತೀಚೆಗೆ ಗೋವಿಂದ್ ಕುಮಾರ್ ಸೇರಿದಂತೆ ಆತನ ತಂಡವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತನ ಅಪರಾಧ ಚಟುವಟಿಕೆಗೆ ತೆರೆ ಎಳೆದಿದ್ದಾರೆ.
ಫೆಬ್ರವರಿ 3, 2024ರಂದು ಮಜ್ಲಿಸ್ ಪಾರ್ಕ್ ಹಾಗೂ ಆಝಾದ್ ಪುರ್ ನಿಲ್ದಾಣಗಳ ನಡುವಿನ ದಿಲ್ಲಿ ಮೆಟ್ರೊ ಹಳಿಗಳಿಂದ ತಾಮ್ರದ ತಂತಿಗಳನ್ನು ಕದಿಯಲಾಗಿದೆ ಎಂದು ದಿಲ್ಲಿ ಮೆಟ್ರೊ ರೈಲ್ವೆ ನಿಗಮದ ಅಧಿಕಾರಿಗಳು ನೀಡಿದ್ದ ದೂರನ್ನು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ, ಇದರ ಬೆನ್ನಿಗೇ, ಮತ್ತೆರಡು ಕಳವು ಪ್ರಕರಣಗಳು ವರದಿಯಾಗಿದ್ದವು. ಹೀಗಾಗಿ ಈ ವಿಷಯದ ಕುರಿತು ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಸುಧಾರಿತ ನಿಗಾವಣೆ ವಿಧಾನಗಳ ಮೂಲಕ, ಕಳ್ಳರ ಗುಂಪು ಹೇಗೆ ಭದ್ರತಾ ಲೋಪಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೊದಲಿಗೆ ಗೋವಿಂದ್ ಕುಮಾರ್ (24), ಆತನ ಸಹಚರನಾದ ಸುಶೀಲ್ ಕುಮಾರ್(29)ನನ್ನು ಪತ್ತೆ ಹಚ್ಚಿರುವ ಪೊಲೀಸರು, ಅವರು ಪರಾರಿಯಾಗಲು ಬಳಸುತ್ತಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ನಂತರ, ಮೂರನೆಯ ಆರೋಪಿ ಆಸ್ ಮುಹಮ್ಮದ್ (29) ಅನ್ನು ಸೆರೆ ಹಿಡಿದಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ದ್ವಾರಕಾ ಮೆಟ್ರೊ ನಿಲ್ದಾಣ ಸೇರಿದಂತೆ ವಿವಿಧ ನಿಲ್ದಾಣಗಳ ಮೆಟ್ರೊ ತಂತಿ ಕಳವಿನಲ್ಲಿ ಭಾಗಿಯಾಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ಆಯುಕ್ತ (ಮೆಟ್ರೊ) ಹರೇಶ್ವರ್ ವಿ. ಸ್ವಾಮಿ, “ಆರೋಪಿಗಳು ಮೆಟ್ರೊ ಹಳಿಗಳ ಮೇಲೇರಲು ನಿರ್ಮಾಣ ಅವಶೇಷಗಳನ್ನು ಬಳಸಿಕೊಳ್ಳುತ್ತಿದ್ದರು. ಕ್ಷಿಪ್ರವಾಗಿ ಮುಳ್ಳು ತಂತಿಗಳನ್ನು ಕತ್ತರಿಸುತ್ತಿದ್ದ ಅವರು, ತಾಮ್ರದ ತಂತಿಗಳ ಉದ್ದನೆಯ ಸೆಕ್ಷನ್ ಗಳನ್ನು ಕದ್ದ ನಂತರ, ಬೊಲೆರೊ ಪಿಕಪ್ ವಾಹನದಲ್ಲಿ ಪರಾರಿಯಾಗುತ್ತಿದ್ದರು. ಗುಪ್ತಚರ ಚಳ ಹಾಗೂ ವಾಹನದ ಸುಳಿವನ್ನು ಆಧರಿಸಿ ಪೊಲೀಸರು ವಿವಿಧ ಸ್ಥಳಗಳ ಮೇಲೆ ನಡೆಸಿದ ದಾಳಿಯ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 80 ಮೀಟರ್ ಉದ್ದದ ತಾಮ್ರದ ತಂತಿಯನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ .
ತಂಡದ ಇತರ ಸದಸ್ಯರನ್ನು ಪತ್ತೆ ಹಚ್ಚಿ, ಸೆರೆ ಹಿಡಿಯುವ ಪ್ರಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆ.