ಟೆಂಪೊದಲ್ಲಿ ಹಣ ಕಳುಹಿಸಿದ್ದರೆ ಅದಾನಿ, ಅಂಬಾನಿಯನ್ನು ಬಂಧಿಸಿ : ಮೋದಿಗೆ ತಿರುಗೇಟು ನೀಡಿದ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | PC : ANI
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷವು ಅದಾನಿ ಮತ್ತು ಅಂಬಾನಿಗಳಿಂದ ‘‘ಟೆಂಪೊಗಳಲ್ಲಿ ಲೋಡುಗಟ್ಟಲೆ ಹಣ ಸ್ವೀಕರಿಸಿದೆ’’ ಎಂಬ ಪ್ರಧಾನಿ ನರೇಂದ್ರ ಮೋದಿಯ ಆರೋಪಗಳಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗಾದರೆ, ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿಯನ್ನು ಪ್ರಧಾನಿ ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ.
‘‘ನೀವು (ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ) ಹೇಮಂತ್ ಸೊರೇನ್ರನ್ನು ಬಂಧಿಸಿದ್ದೀರಿ. ಅದಾನಿ ಮತ್ತು ಅಂಬಾನಿಯನ್ನು ಯಾಕೆ ಬಂಧಿಸುವುದಿಲ್ಲ?’’ ಎಂದು ಖರ್ಗೆ ಪ್ರಶ್ನಿಸಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಲೋಕಸಭಾ ಚುನಾವಣೆ ಆರಂಭವಾದಂದಿನಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯು ‘‘ಅದಾನಿ-ಅಂಬಾನಿಗೆ ಬೈಯುತ್ತಿಲ್ಲ, ಯಾಕೆಂದರೆ ಅವರ ಪಕ್ಷವು ಈ ಉದ್ಯಮಿಗಳಿಂದ ಲಂಚ ಸ್ವೀಕರಿಸಿದೆ’’ ಎಂಬುದಾಗಿ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು.
ಪ್ರಧಾನಿ ನರೇಂದ್ರ ಮೋದಿಯು ಸರಕಾರದ ನೀತಿಗಳಲ್ಲಿ ಅದಾನಿ ಮತ್ತು ಅಂಬಾನಿ ಸೇರಿದಂತೆ ಕೆಲವು ಉದ್ಯಮಿಗಳಿಗೆ ಸಹಾಯ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸುತ್ತಿದ್ದಾರೆ. ಸರಕಾರವು ರೈತರ ಹಿತವನ್ನು ಬಲಿಗೊಟ್ಟು ಕೈಗಾರಿಕೋದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲಗಳನ್ನು ಮನ್ನಾ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
‘‘ಕಾಂಗ್ರೆಸ್ ನ ಯುವರಾಜ ಐದು ವರ್ಷಗಳಿಂದ ಒಂದು ವಿಷಯವನ್ನು ಪದೇ ಪದೇ ಹೇಳುತ್ತಿದ್ದಾರೆ. ರಫೇಲ್ ವಿಷಯ ಬದಿಗೆ ಸರಿದ ಬಳಿಕ, ಐವರು ಕೈಗಾರಿಕೋದ್ಯಮಿಗಳು, ಅದರಲ್ಲೂ ಮುಖ್ಯವಾಗಿ ಅಂಬಾನಿ ಮತ್ತು ಅದಾನಿ ಮೇಲೆ ಅವರು ಕಿಡಿಗಾರಲು ಆರಂಭಿಸಿದರು. ಆದರೆ, ಚುನಾವಣೆ ಘೋಷಣೆಯಾದ ಬಳಿಕ ಅವರು ಈ ಉದ್ಯಮಿಗಳ ಮೇಲೆ ವಾಗ್ದಾಳಿ ನಡೆಸುವುದನ್ನು ನಿಲ್ಲಿಸಿದ್ದಾರೆ. ಅಂಬಾನಿ-ಅದಾನಿಗಳಿಂದ ಎಷ್ಟು ಹಣವನ್ನು ಪಡೆಯಲಾಗಿದೆ ಎನ್ನುವುದನ್ನು ರಾಜಕುಮಾರ ಘೋಷಿಸಲಿ ಎಂದು ತೆಲಂಗಾಣದ ಈ ನೆಲದಲ್ಲಿ ನಾನು ಹೇಳಲು ಬಯಸುತ್ತೇನೆ. ಟೆಂಪೊಗಳಲ್ಲಿ ಲೋಡುಗಟ್ಟಲೆ ಹಣವು ಕಾಂಗ್ರೆಸ್ ಕಚೇರಿಯನ್ನು ತಲುಪಿದೆಯೇ? ಅಂಬಾನಿ-ಅದಾನಿ ನಿಂದನೆಯು ರಾತೋರಾತ್ರಿ ನಿಲ್ಲಬೇಕಾದರೆ ಯಾವ ಒಪ್ಪಂದ ಏರ್ಪಟ್ಟಿದೆ’’ ಎಂದು ಪ್ರಧಾನಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಪ್ರಧಾನಿಯವರು ಅಂಬಾನಿ ಮತ್ತು ಅದಾನಿಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿರುವುದು ಇದೇ ಮೊದಲು ಎಂದು ಹೇಳಿದ್ದರು. ಹಾಗಾದರೆ, ಈ ಕೈಗಾರಿಕೋದ್ಯಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅವರು ಮೋದಿಗೆ ಸವಾಲು ಹಾಕಿದ್ದರು.
‘‘ಅದೂ ಅಲ್ಲದೆ, ಟೆಂಪೊದಲ್ಲಿ ಹಣ ಬರುತ್ತದೆ ಎಂಬುದಾಗಿ ಪ್ರಧಾನಿಯವರು ಹೇಳಿದ್ದಾರೆ. ಇದು ಅವರ ವೈಯಕ್ತಿಕ ಅನುಭವವೇ’’ ಎಂದು ಪ್ರಶ್ನಿಸಿದ್ದರು.