ಮತದಾರರಿಗೆ ಹಣ ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತನ ಬಂಧನ
PC : metrovaartha.com
ಕೊಯಿಮತ್ತೂರು(ತಮಿಳು ನಾಡು): ಇಲ್ಲಿ ಮತದಾರರಿಗೆ ಹಣವನ್ನು ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತ ಜ್ಯೋತಿಮಣಿ ಎಂಬಾತನನ್ನು ಬಂಧಿಸಲಾಗಿದೆ.
ಜ್ಯೋತಿಮಣಿ ಬುಧವಾರ ಇಲ್ಲಿಯ ಪೂಲುವಪಟ್ಟಿಯ ಚಹಾದಂಗಡಿಯಲ್ಲಿ ಹಣವನ್ನು ಹಂಚುತ್ತಿದ್ದ ಮಾಹಿತಿಯನ್ನು ಪಡೆದ ಚುನಾವಣಾ ಆಯೋಗದ ಸಂಚಾರಿ ದಳದ ಅಧಿಕಾರಿಗಳು ಆತನ ಮನೆಗೆ ದಾಳಿ ನಡೆಸಿ 81,000 ರೂ.ನಗದು ಮತ್ತು ಹಲವಾರು ಬೂತ್ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಕೊಯಿಮತ್ತೂರು ಪ್ರಮುಖ ಕ್ಷೇತ್ರಗಳಲ್ಲೊಂದಾಗಿದೆ. ಡಿಎಂಕೆ ಕೊಯಿಮತ್ತೂರಿನ ಮಾಜಿ ಮೇಯರ್ ಗಣಪತಿ ಪಿ.ರಾಜಕುಮಾರ್ ಅವರನ್ನು ಕಣಕ್ಕಿಳಿಸಿದ್ದರೆ ಸಿಂಗಾಯಿ ಜಿ.ರಾಮಚಂದ್ರನ್ ಅವರು ಎಐಎಡಿಎಂಕೆ ಮತ್ತು ಅಣ್ಣಾಮಲೈ ಅವರು ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ.
ಈ ತಿಂಗಳ ಆರಂಭದಲ್ಲಿ ಚುನಾವಣಾ ಆಯೋಗದ ಸಂಚಾರಿ ದಳವು ತಾಂಬರಂ ರೈಲು ನಿಲ್ದಾಣದಲ್ಲಿ ಮೂವರನ್ನು ಬಂಧಿಸಿ,ಅವರು ಸಾಗಿಸುತ್ತಿದ್ದ ನಾಲ್ಕು ಕೋ.ರೂ.ನಗದನ್ನು ವಶಪಡಿಸಿಕೊಂಡಿತ್ತು. ಈ ಹಣ ತಿರುನೆಲ್ವೆಲಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಹಾಲಿ ಶಾಸಕ ನೈನಾರ್ ನಾಗೇಂದ್ರನ್ ಅವರಿಗೆ ಸೇರಿದ್ದೆನ್ನಲಾಗಿದೆ.
ತಮಿಳುನಾಡಿನಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗಾಗಿ ಎ.19ರಂದು ಮತದಾನ ನಡೆಯಲಿದೆ.