ಕೇಜ್ರಿವಾಲ್ ಬಂಧನ: ರಾಜನಾಥ್ ಸಿಂಗ್ ಹೇಳಿದ್ದೇನು?
Photo: PTI
ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಹಾಗಾದರೆ ನ್ಯಾಯಾಲಯಗಳು ಕೂಡಾ ಈ ಮುಖಂಡರಿಗೆ ಏಕೆ ಜಾಮೀನು ನೀಡಿಲ್ಲ" ಎಂದು ಪ್ರಶ್ನಿಸಿದ್ದಾರೆ.
ವಿರೋಧ ಪಕ್ಷಗಳು ದೇಶದ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿವೆ ಎಂದು ಸಂದರ್ಶನವೊಂದರಲ್ಲಿ ಆರೋಪಿಸಿದ ಅವರು, "ಇಂಥ ಹೇಳಿಕೆಗಳನ್ನು ನೀಡುವುದರಿಂದ ಅವರು ಹೊರಬರಬಹುದು ಎಂದು ಭಾವಿಸಿದ್ದರೆ, ಅದು ಅಸಾಧ್ಯ" ಎಂದು ಸ್ಪಷ್ಟಪಡಿಸಿದರು.
ವಿರೋಧ ಪಕ್ಷಗಳ ಮುಖಂಡರು ಬಿಜೆಪಿ ಸೇರಿದರೆ ಸ್ವಚ್ಛರಾಗುತ್ತಾರೆ. ಬಿಜೆಪಿ ವಾಷಿಂಗ್ ಮೆಷಿನ್ ಇದ್ದಂತೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಸಿಂಗ್ ಅಲ್ಲಗಳೆದರು.
"ನಮ್ಮಿಂದಾಗಿ ಕೇಜ್ರಿವಾಲ್ ಜೈಲು ಪಾಲಾಗಿದ್ದಾರೆ ಎಂದು ಭಾವಿಸಿದರೂ, ಅವರಿಗೆ ಏಕೆ ಪರಿಹಾರ ಸಿಗುತ್ತಿಲ್ಲ? ನಾವು ನ್ಯಾಯಾಲಯಗಳನ್ನೂ ನಿಯಂತ್ರಿಸುತ್ತಿದ್ದೇವೆಯೇ? ಈ ಜನ ಏನು ಹೇಳಲು ಬಯಸುತ್ತಿದ್ದಾರೆ? ನಾವು ನ್ಯಾಯಾಲಯಗಳನ್ನೂ ವಶಪಡಿಸಿಕೊಂಡಿದ್ದೇವೆ ಎಂಧು ಧೈರ್ಯವಿದ್ದರೆ ಹೇಳಲಿ. ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕಾನೂನು ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳು ತಮ್ಮ ಕೆಲಸ ಮಾಡುತ್ತಿವೆ. ಆಧಾರ ರಹಿತ ಆರೋಪಗಳ ಕಾರಣಕ್ಕೆ ತಮ್ಮ ಮುಖಂಡರನ್ನು ಜೈಲಿಗೆ ತಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಭಾವಿಸುವುದಾದರೆ, ಅವರು ನ್ಯಾಯಾಲಯದಿಂದ ರಕ್ಷಣೆ ಪಡೆಯಬಹುದು ಎಂದು ಸ್ಪಷ್ಟಪಡಿಸಿದರು.
"ಭಾರತವನ್ನು ಭ್ರಷ್ಟಾಚಾರ ರಹಿತವಾಗಿ ಮಾಡಬೇಕಾಗಿದೆ. ಇದು ನಮ್ಮ ಪ್ರಧಾನಿಯವರ ಆಸೆ. ತಮ್ಮನ್ನು ಆಧಾರ ರಹಿತ ಆರೋಪಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಭಾವಿಸಿದರೆ, ಅವರು ನ್ಯಾಯಾಲಯಗಳಿಂದ ರಕ್ಷಣೆ ಪಡೆಯಬಹುದು. ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಅವರಿಗೆ ಜಾಮೀನು ದೊರಕುತ್ತದೆ ಎಂದಾದರೆ ಅಂಥದ್ದೇ ಪರಿಹಾರ ಇತರ ಮುಖಂಡರಿಗೆ ಏಕೆ ಸಿಗುತ್ತಿಲ್ಲ ಎಂದು ಎಎನ್ಐ ಜತೆ ಮಾತನಾಡಿದ ಅವರು ಪ್ರಶ್ನಿಸಿದರು.