ಅದಾನಿ ಗ್ರೂಪ್ ಕುರಿತು ಲೇಖನ: ಗುಜರಾತ್ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಪತ್ರಕರ್ತರಿಬ್ಬರಿಗೆ ಸುಪ್ರೀಂ ರಕ್ಷಣೆ
ಹೊಸದಿಲ್ಲಿ,: ಅದಾನಿ ಗ್ರೂಪ್ ಕುರಿತು ಲೇಖನವೊಂದಕ್ಕೆ ಸಂಬಂಧಿಸಿದಂತೆ ಗುಜರಾತ್ ಪೋಲಿಸರು ತಮಗೆ ಜಾರಿಗೊಳಿಸಿದ್ದ ಸಮನ್‌ಗಳನ್ನು ಪ್ರಶ್ನಿಸಿದ್ದ ಇಬ್ಬರು ಪತ್ರಕರ್ತರಿಗೆ ಸರ್ವೋಚ್ಚ ನ್ಯಾಯಾಲಯವು ಬಂಧನದಿಂದ ರಕ್ಷಣೆಯನ್ನು ನೀಡಿದೆ.
ಪತ್ರಕರ್ತರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಪಿ.ಕೆ.ಮಿಶ್ರಾ ಅವರ ಪೀಠವು ತನಿಖೆಗೆ ಸಹಕರಿಸುವಂತೆ ಅವರಿಗೆ ನಿರ್ದೇಶನ ನೀಡಿತು. ಅದು ಗುಜರಾತ್ ಸರಕಾರಕ್ಕೆ ನೋಟಿಸನ್ನೂ ಹೊರಡಿಸಿತು.
ಮುಂದಿನ ವಿಚಾರಣೆಯ ದಿನಾಂಕದವರೆಗೆ ಫೈನಾನ್ಶಿಯಲ್ ಟೈಮ್ಸ್‌ನ ಪತ್ರಕರ್ತರಾದ ಬೆಂಜಾಮಿನ್ ನಿಕೋಲಸ್ ಬ್ರೂಕ್ ಪಾರ್ಕಿನ್ ಮತ್ತು ಚೋಲೆ ನಿನಾ ಕಾರ್ನಿಷ್ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಪೀಠವು ಆದೇಶಿಸಿತು. ಸದ್ರಿ ಲೇಖನವನ್ನು ತನ್ನ ಕಕ್ಷಿದಾರರು ಬರೆದಿರಲಿಲ್ಲ ಎಂದು ಪತ್ರಕರ್ತರ ಪರ ವಕೀಲರು ವಾದಿಸಿದರು.
ಈ ವಾರದ ಪೂರ್ವಾರ್ಧದಲ್ಲಿ ಸರ್ವೋಚ್ಚ ನ್ಯಾಯಾಲಯವು ಅದಾನಿ-ಹಿಂಡೆನ್‌ಬರ್ಗ್ ವಿವಾದ ಕುರಿತು ಬರೆದಿದ್ದ ಲೇಖನವೊಂದಕ್ಕೆ ಸಂಬಂಧಿಸಿದಂತೆ ಪತ್ರಕರ್ತರಾದ ರವಿ ನಾಯರ್ ಮತ್ತು ಆನಂದ ಮಂಗ್ನಾಲೆ ಅವರಿಗೆ ಗುಜರಾತ್ ಪೋಲಿಸರಿಂದ ಬಂಧನದ ವಿರುದ್ಧ ಮಧ್ಯಂತರ ರಕ್ಷಣೆಯನ್ನು ಮಂಜೂರು ಮಾಡಿತ್ತು.