ಹಣ, ಪ್ರಚಾರಕ್ಕೆ ಫೆಲೆಸ್ತೀನ್ ಮೇಲಾಗಿರುವ ಗಾಯವನ್ನು ಅಳಿಸಲು ಸಾಧ್ಯವಿಲ್ಲ: ಅರುಂಧತಿ ರಾಯ್ ಪೆನ್ ಪಿಂಟರ್ ಪ್ರಶಸ್ತಿ ಸ್ವೀಕಾರ ಭಾಷಣ
PC : thewire.in
ಹೊಸದಿಲ್ಲಿ: ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರಿಗೆ 2024ರ PEN ಪಿಂಟರ್ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರತಿಷ್ಟಿತ ಬಹುಮಾನಕ್ಕೆ ತನ್ನ ಹೆಸರನ್ನು ಘೋಷಿಸುತ್ತಿದಂತೆ ಅರುಂಧತಿ ರಾಯ್ ತನ್ನ ಬಹುಮಾನದ ಮೊತ್ತವನ್ನು ಫೆಲೆಸ್ತೀನ್ ಮಕ್ಕಳ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದು, ಹಣ, ಪ್ರಚಾರಕ್ಕೆ ಫೆಲೆಸ್ತೀನ್ ಮೇಲಾಗಿರುವ ಗಾಯವನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದಲ್ಲದೆ ಬ್ರಿಟಿಷ್ ಮೂಲದ ಈಜಿಪ್ಟಿನ ಬರಹಗಾರ ಅಲಾ ಅಬ್ದುಲ್ ಫತ್ತಾಹ್ ಅವರನ್ನು ಧೈರ್ಯದ ಬರಹಗಾರ ಎಂದು ಹೆಸರಿಸಿದ್ದು, ಅವರ ಜೊತೆ ತಮ್ಮ ಬಹುಮಾನವನ್ನು ಅರುಂಧತಿ ರಾಯ್ ಹಂಚಿಕೊಂಡಿದ್ದಾರೆ.
ಅ.10ರ ಸಂಜೆ ಬ್ರಿಟಿಷ್ ಲೈಬ್ರರಿಯಲ್ಲಿ ಬಹುಮಾನ ಸ್ವೀಕರಣೆ ವೇಳೆ ಮಾತನಾಡಿದ ಅರುಂಧತಿ ರಾಯ್, PEN Pinter ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಕ್ಕಾಗಿ PENನ ಸದಸ್ಯರು ಮತ್ತು ತೀರ್ಪುಗಾರರರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Photo: X/@UNRWA
ಈ ಪ್ರಶಸ್ತಿಯನ್ನು ಹಂಚಿಕೊಳ್ಳಲು ನಾನು ಈ ವರ್ಷದ ಧೈರ್ಯಶಾಲಿ ಬರಹಗಾರ ಅಲಾ ಅಬ್ದುಲ್ ಫತ್ತಾಹ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಅಲಾ ಅಬ್ದುಲ್ ಫತ್ತಾಹ್, ಧೈರ್ಯದ ಬರಹಗಾರ ಮತ್ತು ನನ್ನ ಸಹ ಪ್ರಶಸ್ತಿ ಪುರಸ್ಕೃತ, ನಿಮಗೆ ನನ್ನ ಧನ್ಯವಾದಗಳು, ನೀವು ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗುವಿರಿ ಎಂದು ನಾವು ಆಶಿಸಿದ್ದೇವೆ ಮತ್ತು ಪ್ರಾರ್ಥಿಸಿದ್ದೇವೆ, ಆದರೆ ಈಜಿಪ್ಟ್ ಸರ್ಕಾರವು ನೀವು ಒಳ್ಳೆಯ ಬರಹಗಾರ ಮತ್ತು ತುಂಬಾ ಅಪಾಯಕಾರಿ ಚಿಂತಕ ಎಂದು ನಿರ್ಧರಿಸಿತು. ಆದ್ದರಿಂದ ನೀವು ಇನ್ನು ಕೂಡ ಜೈಲಿನಲ್ಲಿದ್ದೀರಿ, ಆದರೆ ನೀವು ನಮ್ಮೊಂದಿಗೆ ಇದ್ದೀರಿ ಎಂದು ಹೇಳಿದ್ದಾರೆ.
ʼನನ್ನ ಪದಗಳು ಯಾವುದೇ ಶಕ್ತಿಯನ್ನು ಕಳೆದುಕೊಂಡರೂ ಅವು ನನ್ನಿಂದ ಹೊರ ಬರುತ್ತಲೇ ಇದ್ದವು, ಬೆರಳೆಣಿಕೆಯಷ್ಟು ಜನ ಮಾತ್ರ ಕೇಳುತ್ತಿದ್ದರೂ ನನಗೆ ಇನ್ನೂ ಧ್ವನಿ ಇತ್ತುʼ ಎಂಬ ಅಲಾ ಅಬ್ದುಲ್ ಫತ್ತಾಹ್ ಅವರ ವಾಕ್ಯವನ್ನು ಉಲ್ಲೇಖಿಸಿದ ಅರುಂಧತಿ ರಾಯ್ ನಾವು ನಿಮ್ಮ ಧ್ವನಿಯನ್ನು ಕೇಳುತ್ತಿದ್ದೇವೆ ಎಂದು ಹೇಳಿದ್ದಾರೆ.
PC : m.thewire.in
"ಇಲ್ಲಿ ನೆರೆದಿರುವ ನಿಮ್ಮೆಲ್ಲರಿಗೂ ನಮಸ್ಕಾರಗಳು, ಈ ವೇಳೆ ಇಲ್ಲಿ ನೆರೆದಿರುವ ಪ್ರೇಕ್ಷಕರಿಗಿಂತ ಹೆಚ್ಚಾಗಿ ನನಗೆ ಅಗೋಚರವಾಗಿರುವ ಕೆಲ ಪ್ರೇಕ್ಷಕರು ನೆನಪಿಗೆ ಬರುತ್ತಾರೆ. ನಾನು ಭಾರತದಲ್ಲಿ ಜೈಲಿನಲ್ಲಿರುವ ನನ್ನ ಸ್ನೇಹಿತರು ಮತ್ತು ಒಡನಾಡಿಗಳ ಬಗ್ಗೆ ಮಾತನಾಡುತ್ತಿದ್ದೇನೆ. ವಕೀಲರು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು, ಪತ್ರಕರ್ತರ ಬಗ್ಗೆ ಮಾತನಾಡುತ್ತೇನೆ, ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ, ಖಾಲಿದ್ ಸೈಫಿ, ಶಾರ್ಜೀಲ್ ಇಮಾಮ್, ರೋನಾ ವಿಲ್ಸನ್, ಸುರೇಂದ್ರ ಗಡ್ಲಿಂಗ್, ಮಹೇಶ್ ರಾವುತ್ ಬಗ್ಗೆ ಮಾತನಾಡುತ್ತೇನೆ. ನನ್ನ ಸ್ನೇಹಿತ ಖುರ್ರಂ ಪರ್ವೈಜ್ ನಾನು ನಿಮಗಾಗಿ ಮಾತನಾಡುತ್ತೇನೆ, ನನಗೆ ತಿಳಿದಿರುವ ಅತ್ಯಂತ ಗಮನಾರ್ಹ ವ್ಯಕ್ತಿಗಳಲ್ಲಿ ಒಬ್ಬರು, ನೀವು ಮೂರು ವರ್ಷಗಳಿಂದ ಜೈಲಿನಲ್ಲಿದ್ದೀರಿ, ಇದಲ್ಲದೆ ಇರ್ಫಾನ್ ಮೆಹ್ರಾಜ್ ಮತ್ತು ಕಾಶ್ಮೀರದಲ್ಲಿ ಹಾಗೂ ದೇಶಾದ್ಯಂತ ಸೆರೆವಾಸದಲ್ಲಿರುವ ಸಾವಿರಾರು ಜನರಿಗಾಗಿ ನಾನು ಮಾತನಾಡುತ್ತೇನೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ನಡೆಸುವ ನರಮೇಧದ ಬಗ್ಗೆ ಮಾತನಾಡಿದ ಅರುಂಧತಿ ರಾಯ್, ಗಾಝಾದಲ್ಲಿ ಈಗ ಅಧಿಕೃತ ಸಾವಿನ ಸಂಖ್ಯೆ 42,000 ಆಗಿದೆ. ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿಕೊಂಡು ಮೃತರ ಬಗ್ಗೆ ಮತ್ತು ನಾಪತ್ತೆಯಾದವರ ಬಗ್ಗೆ ಮಾಹಿತಿಯನ್ನು ಇದು ಒಳಗೊಂಡಿಲ್ಲ. Oxfam ನ ಇತ್ತೀಚಿನ ಅಧ್ಯಯನವು ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಇತರ ಯಾವುದೇ ಯುದ್ಧದಲ್ಲಿ ಮಡಿದ ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಇಸ್ರೇಲ್ ಗಾಝಾದಲ್ಲಿ ಹತ್ಯೆ ಮಾಡಿದೆ ಎಂದು ಹೇಳಿದೆ.
PC : thewire.in
ನಾನು ಬರಹಗಾರಳಾಗಿದ್ದೇನೆ, ನಾನು ಮುಸ್ಲಿಮೇತರೆ, ನಾನು ಮಹಿಳೆ, ಹಮಾಸ್, ಹಿಜ್ಬುಲ್ಲಾ ಅಥವಾ ಇರಾನ್ ಆಡಳಿತದಲ್ಲಿ ಬಹಳ ಕಾಲ ಬದುಕುವುದು ನನಗೆ ತುಂಬಾ ಕಷ್ಟ. ಆದರೆ ಇಲ್ಲಿ ವಿಷಯ ಅದಲ್ಲ, ಇತಿಹಾಸ ಮತ್ತು ಅವು ಅಸ್ತಿತ್ವಕ್ಕೆ ಬಂದ ಸಂದರ್ಭಗಳ ಬಗ್ಗೆ ನಮಗೆ ನಾವೇ ಅರಿವು ಮೂಡಿಸುವುದು ಮುಖ್ಯವಾಗಿದೆ. ಅವರು ಇದೀಗ ನಡೆಯುತ್ತಿರುವ ನರಮೇಧದ ವಿರುದ್ಧ ಹೋರಾಡುತ್ತಿದ್ದಾರೆ. ಉದಾರವಾದಿ, ಜಾತ್ಯತೀತ ಶಕ್ತಿಗಳು ಈ ನರಹಂತಕ ಯುದ್ಧದ ವಿರುದ್ಧ ನಿಲ್ಲಬಹುದೇ ಎಂದು ನಮ್ಮನ್ನು ನಾವು ಕೇಳಿಕೊಳ್ಳಬಹುದು. ಏಕೆಂದರೆ, ಪ್ರಪಂಚದ ಎಲ್ಲಾ ಶಕ್ತಿಗಳು ಅವರ ವಿರುದ್ಧವಾಗಿದ್ದಾಗ, ಅವರು ದೇವರನ್ನು ಹೊರತುಪಡಿಸಿ ಯಾರ ಕಡೆಗೆ ತಿರುಗಬೇಕು? ಗಾಝಾ, ವೆಸ್ಟ್ ಬ್ಯಾಂಕ್, ಈಗ ಲೆಬನಾನ್ನಲ್ಲಿ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಏನು ಮಾಡುತ್ತಿದೆ? ಅ. 7 ರ ಹಿಂಸಾಚಾರ ಸೇರಿದಂತೆ ಎಲ್ಲಾ ಹಿಂಸಾಚಾರದ ಮೂಲವೆಂದರೆ ಇಸ್ರೇಲ್ ಫೆಲೆಸ್ತೀನ್ ಭೂಮಿಯನ್ನು ಆಕ್ರಮಿಸಿಕೊಂಡಿರುವುದು ಮತ್ತು ಫೆಲೆಸ್ತೀನ್ ಜನರನ್ನು ಅಧೀನಗೊಳಿಸಿರುವುದು. ಈ ಇತಿಹಾಸವು 7 ಅ.2023 ರಂದು ಪ್ರಾರಂಭವಾಗಲಿಲ್ಲ ಎಂದು ಹೇಳಿದ್ದಾರೆ.
ಇಸ್ರೇಲ್ ಆತ್ಮರಕ್ಷಣೆಗಾಗಿ ಯುದ್ಧ ಮಾಡುತ್ತಿಲ್ಲ. ಇದು ಆಕ್ರಮಣಕಾರಿ ಯುದ್ಧದಲ್ಲಿ ಹೋರಾಡುತ್ತಿದೆ. ಇಸ್ರೇಲ್ ಹೆಚ್ಚಿನ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಬಯಸುತ್ತಿದೆ, ವರ್ಣಭೇದ ನೀತಿಯನ್ನು ಬಲಪಡಿಸಲು ಮತ್ತು ಫೆಲೆಸ್ತೀನ್ ಜನರ ಮೇಲೆ ಮತ್ತು ಆ ಪ್ರದೇಶದ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಲು ಯುದ್ಧ ನಡೆಸುತ್ತಿದೆ. ಇಸ್ರೇಲ್ ನ ನರಮೇಧವನ್ನು ಆ ದೇಶಗಳಲ್ಲಿನ ಬಹುಪಾಲು ನಾಗರಿಕರು ಒಪ್ಪುವುದಿಲ್ಲ ಎಂದು ಸಮೀಕ್ಷೆಗಳು ತೋರಿಸುತ್ತವೆ. ಅಲ್ಲಿ ನಡೆದಿರುವ ಪ್ರತಿಭಟನೆಗಳು ತೋರಿಸುತ್ತದೆ. ಇದಲ್ಲದೆ ಅಮೆರಿಕ ಸೇರಿದಂತೆ ಜಗತ್ತಿನ ಕೆಲವೆಡೆ ಈ ಬಗ್ಗೆ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರ ವಾಕ್ ಸ್ವಾತಂತ್ರ್ಯ ಮತ್ತು ಧ್ವನಿಯನ್ನು ಕೂಡ ಹತ್ತಿಕ್ಕಲಾಗಿದೆ ಎಂದು ಹೇಳಿದ್ದಾರೆ.
ಅಮೆರಿಕ ಸರ್ಕಾರವು ಇಸ್ರೇಲ್ ಗೆ ಕೊಟ್ಟ ತನ್ನ ಬೆಂಬಲವನ್ನು ಹಿಂತೆಗೆದುಕೊಂಡರೆ, ಯುದ್ಧವು ಇಂದು ನಿಲ್ಲಬಹುದು. ಈ ಕ್ಷಣದಲ್ಲಿ ಹಗೆತನಗಳು ಕೊನೆಗೊಳ್ಳಬಹುದು. ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬಹುದು, ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆ ಮಾಡಬಹುದು. ಮಾತುಕತೆ ಮೂಲಕ ಲಕ್ಷಾಂತರ ಜನರ ನೋವನ್ನು ಮತ್ತು ಬಿಕ್ಕಟ್ಟನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಫೆಲೆಸ್ತೀನ್ ನರಮೇಧದ ಬಗ್ಗೆ ಜಾಗತಿಕ ಶಕ್ತಿಗಳ ಮೌನವನ್ನು ಖಂಡಿಸಿದ ಅರುಂಧತಿ ರಾಯ್, ಅಮೆರಿಕವು ಇಸ್ರೇಲ್ ನ ಅಪರಾಧಗಳಿಗೆ ಅಚಲವಾದ ಬೆಂಬಲವನ್ನು ನೀಡುತ್ತದೆ ಎಂದು ಆರೋಪಿಸಿದ್ದಾರೆ. ಗಾಝಾ ಮತ್ತು ಲೆಬನಾನ್ನಲ್ಲಿನ ಹಿಂಸಾಚಾರವು ಪ್ರಾದೇಶಿಕ ಘರ್ಷಣೆಯಾಗಿ ಉಲ್ಬಣಗೊಂಡಾಗ, ನಿಜವಾದ ವೀರರು ಕಾಣದಂತೆ ಉಳಿಯುತ್ತಾರೆ. ಆದರೆ, ಅವರು ಒಂದು ದಿನ, ನದಿಯಿಂದ ಸಮುದ್ರದವರೆಗೆ, ಫೆಲೆಸ್ತೀನ್ ಮುಕ್ತವಾಗುತ್ತದೆ ಎಂದು ನಂಬಿ ಹೋರಾಟವನ್ನು ಮುಂದುವರೆಸುತ್ತಾರೆ. ನಿಜವಾದ ವಿಮೋಚನೆಯನ್ನು ಸಮಯಾವಧಿಯಿಂದ ಅಳೆಯಲಾಗುವುದಿಲ್ಲ, ಜನರ ನ್ಯಾಯದ ನಿರಂತರ ಹೋರಾಟದಿಂದ ಅಳೆಯಲಾಗುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ.