ಆಪ್ ಬೆಂಬಲಿಗರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಬಿಜೆಪಿಯಿಂದ ಸಂಚು: ಕೇಜ್ರಿವಾಲ್ ಆರೋಪ
ಅರವಿಂದ್ ಕೇಜ್ರಿವಾಲ್ (Photo: PTI)
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಬಿಜೆಪಿ ಮತದಾರರ ಪಟ್ಟಿಯನ್ನು ತಿರುಚುತ್ತಿದ್ದು, ಆಪ್ (AAP) ಬೆಂಬಲಿಗರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಲು ಸಂಚು ರೂಪಿಸಿದೆ. ಇದು ಬಿಜೆಪಿಯ ʼಆಪರೇಷನ್ ಕಮಲʼದ ಭಾಗ ಎಂದು ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ದಿಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ರವಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಬಿಜೆಪಿ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಡಿಸೆಂಬರ್ 15ರಿಂದ ಮತದಾರರ ಪಟ್ಟಿಯನ್ನು ತಿರುಚುತ್ತಿದೆ. ಈ 15 ದಿನಗಳ ಅವಧಿಯಲ್ಲಿ ಬಿಜೆಪಿ 5,000 ಹೆಸರುಗಳನ್ನು ತೆಗೆದುಹಾಕಲು ಮತ್ತು 7,500 ಹೊಸ ಹೆಸರನ್ನು ಸೇರಿಸಲು ಅರ್ಜಿ ಸಲ್ಲಿಸಿದೆ. ಒಟ್ಟು ಮತದಾರರಲ್ಲಿ ಸರಿಸುಮಾರು 12% ದಷ್ಟು ಮತದಾರರ ಹಕ್ಕನ್ನು ನೀವು ಕಸಿದುಕೊಳ್ಳುತ್ತಿದ್ದರೆ ಚುನಾವಣೆ ನಡೆಸುವ ಅಗತ್ಯವೇನಿದೆ? ಇದು ಚುನಾವಣೆಯ ಹೆಸರಿನಲ್ಲಿ ನಡೆಯುವ ಆಟವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದ್ದಾರೆ.
ಅಪ್ರಾಮಾಣಿಕತೆಯಿಂದ ಚುನಾವಣೆಯನ್ನು ಹೇಗಾದರೂ ಗೆಲ್ಲಬೇಕೆಂದು ಬಿಜೆಪಿ ಬಯಸುತ್ತದೆ ಆದರೆ, ದಿಲ್ಲಿಯ ಜನರು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬಳಸಿದ ತಂತ್ರಗಳನ್ನು ಬಳಸಿ ಅವರನ್ನು ನಾವು ಇಲ್ಲಿ ಗೆಲ್ಲಲು ಬಿಡುವುದಿಲ್ಲ. ಬಿಜೆಪಿ ಈಗಾಗಲೇ ಚುನಾವಣೆಯಲ್ಲಿ ಸೋತಿದೆ. ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಅಥವಾ ಸರಿಯಾದ ಅಭ್ಯರ್ಥಿಗಳೇ ಇಲ್ಲ. ಅವರು ತಂತ್ರಗಳ ಮೂಲಕ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ, ಆದರೆ ನಾವು ಅವರನ್ನು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಒಂದೇ ಕ್ಷೇತ್ರದಲ್ಲಿ ಮತದಾರರನ್ನು ಅಳಿಸಲು ಬಿಜೆಪಿ 11,000 ಅರ್ಜಿಗಳನ್ನು ಸಲ್ಲಿಸಿದೆ. ಆದರೆ, ಮುಖ್ಯ ಚುನಾವಣಾ ಆಯುಕ್ತರ ಮಧ್ಯಪ್ರವೇಶದಿಂದ ಈ ಕ್ರಮಕ್ಕೆ ಅಡ್ಡಿಯಾಗಿದೆ. ಆಪರೇಷನ್ ಕಮಲ ಈಗ ನನ್ನ ಕ್ಷೇತ್ರವನ್ನು ತಲುಪಿದೆ. ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಮತದಾರರ ಪಟ್ಟಿಯನ್ನು ದುರ್ಬಳಕೆ ಮಾಡಲು ಯತ್ನಿಸುತ್ತಿದ್ದಾರೆ. ಈ ಕ್ರಮವು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದ್ದು, ಇಂತಹ ಕ್ರಮಗಳನ್ನು ತಡೆಯಲು ಚುನಾವಣಾ ಆಯೋಗವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.