ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ: ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಬಂಧನ
ಬಿಭವ್ ಕುಮಾರ್ | PC : NDTV
ಹೊಸದಿಲ್ಲಿ: ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ಆಪ್ತ ಸಹಾಯಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ಅರವಿಂದ್ ಕೇಜ್ರಿವಾಲ್ರ ನಿವಾಸಕ್ಕೆ ತೆರಳಿದ್ದಾಗ, ಅವರ ಆಪ್ತ ಕಾರ್ಯದರ್ಶಿಯಾದ ಬಿಭವ್ ಕುಮಾರ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ.
ಇಂದು ಮಧ್ಯಾಹ್ನದ ಸುಮಾರಿಗೆ ಬಿಭವ್ ಕುಮಾರ್ ಅವರನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ನಿವಾಸದಿಂದ ವಶಕ್ಕೆ ಪಡೆಯಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ಅವರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ಪ್ರಕರಣದ ಸಂಬಂಧ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಈಮೇಲ್ ರವಾನಿಸಿ ಭರವಸೆ ನೀಡಲಾಗಿದ್ದರೂ, ನಾವು ಇದುವರೆಗೆ ಪೊಲೀಸರಿಂದ ಯಾವುದೇ ಮಾಹಿತಿಯನ್ನು ಸ್ವೀಕರಿಸಿಲ್ಲ ಎಂದು ಆರೋಪಿ ಬಿಭವ್ ಕುಮಾರ್ ಪರ ವಕೀಲರು ತಿಳಿಸಿದ್ದಾರೆ.
ಈ ಘಟನೆಯಿಂದ ರಾಜಕೀಯ ಬಿರುಗಾಳಿ ಎದ್ದಿದ್ದು, ಅರವಿಂದ್ ಕೇಜ್ರಿವಾಲ್ರ ಮೌನವನ್ನು ಟೀಕಿಸಿರುವ ಬಿಜೆಪಿ, ಈ ಪ್ರಕರಣದ ಮುಖ್ಯ ಅಪರಾಧಿ ಅರವಿಂದ್ ಕೇಜ್ರಿವಾಲ್ ಎಂದು ಆರೋಪಿಸಿದೆ.