ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರಾಜ್ಯಸಭೆಗೆ?

ಅರವಿಂದ್ ಕೇಜ್ರಿವಾಲ್ (Photo: PTI)
ಹೊಸದಿಲ್ಲಿ: ಪಶ್ಚಿಮ ಲುಧಿಯಾನ ರಾಜ್ಯಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯನ್ನಾಗಿ ಹಾಲಿ ಪಂಜಾಬ್ ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾರನ್ನು ಆಪ್ ಕಣಕ್ಕಿಳಿಸಿದೆ. ಹೀಗಿದ್ದೂ, ಪಶ್ಚಿಮ ಲುಧಿಯಾನ ರಾಜ್ಯಸಭಾ ಉಪ ಚುನಾವಣೆಯಲ್ಲಿ ಸಂಜೀವ್ ಅರೋರಾ ಬದಲಿಗೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೇ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ, ಈ ವದಂತಿಗಳನ್ನು ಆಡಳಿತಾರೂಢ ಆಪ್ ಅಲ್ಲಗಳೆದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಂಜಾಬ್ ಆಪ್ ಘಟಕದ ವಕ್ತಾರ ಜಗ್ತಾರ್ ಸಿಂಗ್, “ಸಂಜೀವ್ ಅರೋರಾ ಲುಧಿಯಾನದವರಾಗಿದ್ದು, ಹೀಗಾಗಿ ಅವರನ್ನು ಅಲ್ಲಿಂದ ಕಣಕ್ಕಿಳಿಸಲಾಗಿದೆ. ಯಾರು ರಾಜ್ಯಸಭಾ ಅಭ್ಯರ್ಥಿಯಾಗಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಕೇಜ್ರಿವಾಲ್ ರಾಜ್ಯಸಭೆಗೆ ಹೋಗಲಿದ್ದಾರೆ ಎಂಬ ಸುದ್ದಿ ಕೇವಲ ವದಂತಿಯಾಗಿದೆ. ವಿರೋಧ ಪಕ್ಷಗಳು ಈ ವದಂತಿಗಳನ್ನು ಹರಡುತ್ತಿವೆ. ಕೇಜ್ರಿವಾಲ್ ರನ್ನು ರಾಜ್ಯಸಭೆಗೆ ಕಳಿಸುವ ಕುರಿತು ಪಕ್ಷದೊಳಗೆ ಯಾವುದೇ ಚರ್ಚೆಯಾಗಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಆಪ್ ಪಕ್ಷದ 10 ಸಂಸದರಿದ್ದು, ಏಳು ಮಂದಿ ಪಂಜಾಬ್ ಹಾಗೂ ಮೂವರು ದಿಲ್ಲಿಯ ಸಂಸದರಾಗಿದ್ದಾರೆ. ದಿಲ್ಲಿಯ ರಾಜ್ಯಸಭಾ ಸದಸ್ಯತ್ವದ ಅವಧಿ 2030ರವರೆಗೆ ಇದ್ದು, ಪಂಜಾಬ್ ನ ರಾಜ್ಯಸಭಾ ಸದಸ್ಯತ್ವದ ಅವಧಿ 2028ಕ್ಕೆ ಅಂತ್ಯಗೊಳ್ಳಲಿದೆ.
ಸದ್ಯ ದಿಲ್ಲಿಯಿಂದ ಆಪ್ ನ ಸಂಜಯ್ ಸಿಂಗ್ ಹಾಗೂ ನಾರಾಯಣ್ ದಾಸ್ ಗುಪ್ತ ರಾಜ್ಯಸಭಾ ಸಂಸದರಾಗಿದ್ದು, ಕಳೆದ ಕೆಲವು ತಿಂಗಳಿನಿಂದ ಕೇಜ್ರಿವಾಲ್ ಹಾಗೂ ಆಪ್ ಪಕ್ಷದ ಕಟು ಟೀಕಾಕಾರರಾಗಿ ಬದಲಾಗಿರುವ ಸ್ವಾತಿ ಮಲಿವಾಲ್ ಕೂಡಾ ರಾಜ್ಯಸಭೆಯಲ್ಲಿ ಆಪ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.
ಅರವಿಂದ್ ಕೇಜ್ರಿವಾಲ್ ಏನಾದರೂ ರಾಜ್ಯಸಭೆ ಪ್ರವೇಶಿಸಬೇಕಿದ್ದರೆ, ಆಪ್ ನ ಓರ್ವ ರಾಜ್ಯಸಭಾ ಸದಸ್ಯರು ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಆದರೆ, ದಿಲ್ಲಿಯಲ್ಲಿ ಸಾಕಷ್ಟು ಸಂಖ್ಯಾಬಲವಿಲ್ಲದೆ ಇರುವುದರಿಂದ, ಆಪ್ ಮತ್ತೆ ಅಲ್ಲಿ ರಾಜ್ಯಸಭಾ ಸ್ಥಾನವನ್ನು ಗೆಲ್ಲುವುದು ಸಾಧ್ಯವಿಲ್ಲ. ಆದರೆ, ಪಂಜಾಬ್ ನಲ್ಲಿ ಆಪ್ 93 ಶಾಸಕರು ಹಾಗೂ ಮೂರು ಮಂದಿ ಸಂಸದರನ್ನು ಹೊಂದಿರುವುದರಿಂದ, ಅಲ್ಲಿನ ರಾಜ್ಯಸಭಾ ಸ್ಥಾನವನ್ನು ಸುಲಭವಾಗಿ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ.
2015 ಹಾಗೂ 2020ರ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬೀಗಿದ್ದ ಆಪ್, ಈ ಬಾರಿಯ ಚುನಾವಣೆಯಲ್ಲಿ ಕೇವಲ 22 ಸ್ಥಾನಗಳಿಗೆ ಕುಸಿದಿತ್ತು. ಅಲ್ಲದೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರೇ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಹೀಗಾಗಿ, ಸದ್ಯ ಚುನಾಯಿತ ಪ್ರತಿನಿಧಿಯಲ್ಲದ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮೂಲಕ ರಾಜ್ಯಸಭೆಗೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಆರೋಪಿಸುತ್ತಿವೆ.