ಈಡಿ ಸಮನ್ಸ್ ‘ಕಾನೂನು ಬಾಹಿರ, ರಾಜಕೀಯ ಪ್ರೇರಿತ’: ನೋಟಿಸ್ ಹಿಂಪಡೆಯುವಂತೆ ಈಡಿಗೆ ಸೂಚಿಸಿದ ಕೇಜ್ರಿವಾಲ್
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (PTI)
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಯ ಕುರಿತು ತಮ್ಮ ಹೇಳಿಕೆಯನ್ನು ದಾಖಲಿಸಲು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು (ನವೆಂಬರ್ 2, ಗುರುವಾರ) ಜಾರಿ ನಿರ್ದೇಶನಾಲಯದ ಕಚೇರಿಗೆ ತೆರಳುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಕೇಜ್ರಿವಾಲ್ ಇಂದು ದಿಲ್ಲಿಯಲ್ಲಿನ ಜಾರಿ ನಿರ್ದೇಶನಾಲಯದ ಕಚೇರಿ ಎದುರು ಬೆಳಗ್ಗೆ 11 ಗಂಟೆಗೆ ಹಾಜರಾಗಬೇಕಿತ್ತು. ಆದರೆ, ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಅವರು, ಜಾರಿ ನಿರ್ದೇಶನಾಲಯವು ಜಾರಿ ಮಾಡಿರುವ ಸಮನ್ಸ್ ‘ಕಾನೂನು ಬಾಹಿರ ಮತ್ತು ರಾಜಕೀಯ ಪ್ರೇರಿತ’ವಾಗಿರುವುದರಿಂದ ಅದನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷದ ಪರವಾಗಿ ಪ್ರಚಾರ ಮಾಡಲು ಮಧ್ಯಪ್ರದೇಶಕ್ಕೆ ತೆರಳುತ್ತಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯವು ಹೊಸದಾಗಿ ಸಮನ್ಸ್ ಜಾರಿಗೊಳಿಸುವ ಸಾಧ್ಯತೆ ಇದೆ.
ಯಾವುದೇ ವ್ಯಕ್ತಿ ಜಾರಿ ನಿರ್ದೇಶನಾಲಯದ ಸಮನ್ಸ್ ಅನ್ನು ಮೂರು ಬಾರಿ ತಪ್ಪಿಸಿಕೊಳ್ಳಬಹುದಾಗಿದೆ. ಇದಾದ ನಂತರ ಜಾರಿ ನಿರ್ದೇಶನಾಲಯವು ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಪಡೆಯಬಹುದಾಗಿದೆ.
ಈ ನಡುವೆ, ಅರವಿಂದ್ ಕೇಜ್ರಿವಾಲ್ ಗೆ ನಿರೀಕ್ಷಣಾ ಜಾಮೀನು ಪಡೆಯುವ ಆಯ್ಕೆ ಇದ್ದು, ಅವರು ಜಾರಿ ನಿರ್ದೇಶನಾಲಯದ ಸಮನ್ಸ್ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ.