ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ವೀಡಿಯೊಗಳ ಹಾವಳಿ: ಚುನಾವಣೆಗಳ ನಡುವೆ ತಪ್ಪು ಮಾಹಿತಿಯನ್ನು ಗುರುತಿಸುವುದು ಹೇಗೆ?
Photo: moneycontrol.com
ಹೊಸದಿಲ್ಲಿ: ಲೋಕಸಭಾ ಚುನಾವಣೆಗಳಿಗೆ ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ. ಕಳೆದ ಕೆಲವು ವಾರಗಳಿಂದಲೂ ಆನ್ಲೈನ್ನಲ್ಲಿ ತಪ್ಪು ಮಾಹಿತಿಗಳ ಮತ್ತು ಡೀಪ್ ಫೇಕ್ ವೀಡಿಯೊಗಳ ಮಹಾಪೂರವೇ ಹರಿಯುತ್ತಿದೆ.
ಈ ವಾರ ಬಾಲಿವುಡ್ ನಟ ಆಮಿರ್ ಖಾನ್ ಅವರ ಎರಡು ವೀಡಿಯೊಗಳು ವೈರಲ್ ಆಗಿದ್ದವು. ಇವೆರಡನ್ನೂ ಅವರ ಜನಪ್ರಿಯ ಟಿವಿ ಕಾರ್ಯಕ್ರಮ ‘ಸತ್ಯಮೇವ ಜಯತೆ’ಯ ಪ್ರಚಾರದ ವೀಡಿಯೊಗಳನ್ನು ತಿರುಚಿ ಸಿದ್ಧಗೊಳಿಸಲಾಗಿತ್ತು. ಒಂದರಲ್ಲಿ ಖಾನ್ ಅವರು ಕಾಂಗ್ರೆಸ್ ಪಕ್ಷವನ್ನು ಸ್ಪಷ್ಟವಾಗಿ ಬೆಂಬಲಿಸುತ್ತಿದ್ದಂತೆ ಕಂಡು ಬಂದಿದ್ದರೆ ಇನ್ನೊಂದರಲ್ಲಿ ಅವರು ’ನ್ಯಾಯ’ದ ಬಗ್ಗೆ ಮಾತನಾಡಿದ್ದರು. ‘ನ್ಯಾಯ’ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪ್ರಮುಖವಾಗಿ ಪ್ರಸ್ತಾವಿಸುತ್ತಿರುವ ಅಂಶವಾಗಿದ್ದು, ಅದರ ಚುನಾವಣಾ ಪ್ರಣಾಳಿಕೆಯು ‘ನ್ಯಾಯ ಪತ್ರ ’ಶೀರ್ಷಿಕೆಯನ್ನು ಹೊಂದಿದೆ.
ಇತ್ತೀಚಿಗೆ ನಟ ರಣವೀರ್ ಸಿಂಗ್ ಅವರೂ ಡೀಪ್ಫೇಕ್ ತಂತ್ರಜ್ಞಾನದ ಬಲಿಪಶುವಾಗಿದ್ದರು. ನಿರುದ್ಯೋಗ ಮತ್ತು ಹಣದುಬ್ಬರ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವಂತೆ ತೋರಿಸುವ ಡೀಪ್ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆಗಿತ್ತು. ಮೂಲ ವೀಡಿಯೊದಲ್ಲಿ ವಾಸ್ತವದಲ್ಲಿ ಸಿಂಗ್ ಮೋದಿಯವರನ್ನು ಹೊಗಳಿದ್ದರು.
ಈ ಡೀಪ್ಫೇಕ್ ವೀಡಿಯೊಗಳನ್ನು ಹೇಗೆ ನಿರ್ಮಿಸಲಾಗುತ್ತದೆ ಮತ್ತು ಅವುಗಳನ್ನು ನೀವು ಹೇಗೆ ಪತ್ತೆ ಹಚ್ಚಬಹುದು? ಇಲ್ಲಿದೆ ಮಾಹಿತಿ...
ಧ್ವನಿ ವಿನಿಮಯ ತಂತ್ರಜ್ಞಾನ
ಐಐಟಿ ಜೋಧಪುರದ ಸಹಯೋಗದೊಂದಿಗೆ ಅಭಿವೃದ್ಧಿಗೊಳಿಸಲಾಗಿರುವ itisaar.ai ಕೃತಕ ಬುದ್ಧಿಮತ್ತೆ (ಎಐ) ಪತ್ತೆ ಸಾಧನವು ಧ್ವನಿ ವಿನಿಮಯ ತಂತ್ರಜ್ಞಾನವನ್ನು ಬಳಸಿಕೊಂಡು ಈ ವೀಡಿಯೊಗಳನ್ನು ಸೃಷ್ಟಿಸಲಾಗಿದೆ ಎನ್ನುವುದನ್ನು ತೋರಿಸಿದೆ.
ಹೆಸರೇ ಸೂಚಿಸುವಂತೆ ಇದು ವ್ಯಕ್ತಿಯ ಧ್ವನಿಯನ್ನು ಬದಲಿಸಲು ಅಥವಾ ಅನುಕರಿಸಲು ಎಐ ಅಲ್ಗರಿದಂ ಅನ್ನು ಬಳಸುವ ಪ್ರಕ್ರಿಯೆಯನ್ನು ಉಲ್ಲೇಖಿಸುತ್ತದೆ. ಈ ತಂತ್ರಜ್ಞಾನವು ವೀಡಿಯೊಗಳನ್ನು ಹೆಚ್ಚು ನೈಜವಾಗಿಸಲು ಉಚ್ಚಾರಣೆ,ಧಾಟಿ, ಶ್ರುತಿ ಮತ್ತು ಮಾತನಾಡುವ ಮಾದರಿಗಳನ್ನು ಬದಲಿಸಲು ಸೃಷ್ಟಿಕರ್ತರಿಗೆ ಅವಕಾಶವನ್ನು ನೀಡುತ್ತದೆ.
ಪ್ರಸ್ತುತ ಬಳಸಲು ಸುಲಭವಾಗಿರುವ ಹಲವಾರು ಎಐ ಧ್ವನಿ ವಿನಿಮಯ ಸಾಧನಗಳು ಉಚಿತವಾಗಿ ಲಭ್ಯವಿವೆ. ನಕಲಿ ವೀಡಿಯೊವನ್ನು ಸೃಷ್ಟಿಸುವ ವ್ಯಕ್ತಿ ತಾನು ಬದಲಿಸಲು ಬಯಸುವ ಧ್ವನಿಯ ಸ್ಯಾಂಪಲ್ನ್ನು ಅಪ್ಲೋಡ್ ಅಥವಾ ರೆಕಾರ್ಡ್ ಮಾಡಬೇಕು ಮತ್ತು ನಂತರ ಅಪ್ಲೋಡ್ ಮಾಡಿದ ಸ್ಯಾಂಪಲ್ನ್ನು ಸಾಧ್ಯವಾದಷ್ಟು ನೈಜವಾಗಿಸಲು ಸೆಟ್ಟಿಂಗ್ಗಳನ್ನು ಅನುಕೂಲಕರವಾಗಿ ಬದಲಿಸಿಕೊಳ್ಳಬೇಕು.
ಡೀಪ್ಫೇಕ್ಗಳನ್ನು ಪತ್ತೆ ಹಚ್ಚುವುದು ಹೇಗೆ?:
ಉತ್ತಮವಾಗಿ ನಿರ್ಮಿಸಲಾದ ಡೀಪ್ಫೇಕ್ಗಳನ್ನು ಗುರುತಿಸುವುದು ಸುಲಭವಲ್ಲವಾದರೂ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಕ್ರೋಲ್ ಮಾಡುವಾಗ, ವಿಶೇಷವಾಗಿ ಚುನಾವಣಾ ಸಮಯದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಟಿಪ್ಸ್ ಇಲ್ಲಿವೆ:
ಮೂಲಗಳನ್ನು ಪರಿಶೀಲಿಸಿ: ಅಪರಿಚಿತ ಮೂಲಗಳಿಂದ ಆಡಿಯೊ ಅಥವಾ ವೀಡಿಯೊ ಕಂಟೆಂಟ್ಗಳ ಬಗ್ಗೆ,ವಿಶೇಷವಾಗಿ ಅವು ವಿವಾದಾತ್ಮಕ ಅಥವಾ ಸಂವೇದನಾಶೀಲವಾಗಿ ಕಂಡು ಬಂದರೆ, ಜಾಗರೂಕತೆಯನ್ನು ವಹಿಸಿ. ಯಾವುದೇ ಅನುಮಾನಾಸ್ಪದ ಪೋಸ್ಟ್ ಅನ್ನು ವಿಶ್ವಾಸಾರ್ಹ ಮೂಲಗಳು ಮತ್ತು ಮಾಧ್ಯಮ ಸಂಸ್ಥೆಗಳೊಂದಿಗೆ ಹೋಲಿಸಿ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ.
ಅಸಮಂಜಸತೆಗಳನ್ನು ಆಲಿಸಿ: ಡೀಪ್ಫೇಕ್ ವೀಡಿಯೊ ಧ್ವನಿಯ ಅಸಹಜ ಧಾಟಿ,ಕೊಂಚ ರೊಬೊಟಿಕ್ ಮಾತು ಮತ್ತು ಅನಿಯಮಿತ ವಿರಾಮಗಳಂತಹ ಸೂಕ್ಷ್ಮ ಅಸಮಂಜಸತೆಗಳನ್ನು ಪ್ರದರ್ಶಿಸಬಹುದು. ತಿರುಚಲಾದ ಅಥವಾ ಸಂಶ್ಲೇಷಿತ ಭಾಷಣದ ಸುಳಿವು ನೀಡಬಲ್ಲ ಈ ಸಂಕೇತಗಳನ್ನು ಸೂಕ್ಷ್ಮವಾಗಿ ಆಲಿಸಿ.
ವಿಜುವಲ್ ಕಂಟೆಂಟ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿ: ಡೀಪ್ಫೇಕ್ ವೀಡಿಯೊ ಹೆಚ್ಚಾಗಿ ಬದಲಿಸಲಾದ ವೀಡಿಯೊ ತುಣುಕಿನಂತಹ ತಿರುಚಲಾದ ವಿಜುವಲ್ ಕಂಟೆಂಟ್ ಅನ್ನು ಹೊಂದಿರುತ್ತದೆ. ಯಾವುದೇ ಅಸಮಂಜಸತೆ ಅಥವಾ ವ್ಯತ್ಯಾಸಗಳಿಗಾಗಿ ಆಡಿಯೊ ಮತ್ತು ವಿಜುವಲ್ ಅಂಶಗಳನ್ನು ಪರಿಶೀಲಿಸಿ. ಉದಾಹರಣೆಗೆ ಧ್ವನಿಗೆ ಅನುಗುಣವಾಗಿ ತುಟಿಗಳು ಚಲಿಸುತ್ತಿಲ್ಲವಾದರೆ ನೀವು ನೋಡುತ್ತಿರುವ ವೀಡಿಯೊ ನಕಲಿಯಾಗಿರಬಹುದು.
ಪ್ರಚಲಿತ ವಿದ್ಯಮಾನಗಳ ಅರಿವಿರಲಿ: ದೈನಂದಿನ ಸುದ್ದಿಗಳು ಮತ್ತು ಘಟನೆಗಳ ಬಗ್ಗೆ ಸದಾ ಮಾಹಿತಿಗಳನ್ನು ಹೊಂದಿರುವುದು ಡೀಪ್ ಫೇಕ್ಗಳೊಂದಿಗೆ ಗುರುತಿಸಿಕೊಂಡಿರುವ ಅಪಾಯಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖವಾಗುತ್ತದೆ. ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಸಾಮಾನ್ಯ ಅರಿವನ್ನು ಹೊಂದಿರುವ ಜನರನ್ನು ಮೂರ್ಖರನ್ನಾಗಿಸುವುದು ಸುಲಭವಲ್ಲ.
ಎಐ ವಾಯಿಸ್ ಡಿಟೆಕ್ಟರ್ಗಳನ್ನು ಬಳಸಿ: ಆಪ್ಟಿಕ್ನ ‘ AI or Not ’ನಂತಹ ಕೆಲವು ಎಐ ಡಿಟೆಕ್ಟರ್ಗಳು ಉಚಿತ ಬಳಕೆಗೆ ಲಭ್ಯವಿವೆ. ಯಾವುದೇ ಶಂಕಾಸ್ಪದ ಆಡಿಯೊ ಅಥವಾ ವೀಡಿಯೊವನ್ನು ಇಂತಹ ಡಿಟೆಕ್ಟರ್ಗಳಿಗೆ ಅಪ್ಲೋಡ್ ಮಾಡಿದರೆ ಕಂಟೆಂಟ್ನ ಸತ್ಯಾಸತ್ಯತೆಯ ಬಗ್ಗೆ ಅದು ನಿಮಗೆ ತಿಳಿಸುತ್ತದೆ.