ಕೇರಳ | ಪೊಲೀಸರ ತಪಾಸಣೆಯ ವೇಳೆ ಎಂಡಿಎಂ ಪ್ಯಾಕೇಟ್ ನುಂಗಿದ್ದ ವ್ಯಕ್ತಿ ಮೃತ್ಯು

PC : indianexpress.com
ತಿರುವನಂತಪುರಂ: ಪೊಲೀಸರ ತಪಾಸಣೆಯ ವೇಳೆ ಸಿಕ್ಕಿ ಹಾಕಿಕೊಂಡ ಮಾದಕ ದ್ರವ್ಯ ಮಾರಾಟಗಾರನೊಬ್ಬ ಎರಡು ಎಂಡಿಎಂಎ ಪ್ಯಾಕೆಟ್ ಗಳನ್ನು ಸೇವಿಸಿ ಮೃತಪಟ್ಟ ನಂತರ, ಕೃತಕ ಮಾದಕ ದ್ರವ್ಯಗಳ ವಿರುದ್ಧದ ಕಾರ್ಯಾಚರಣೆಯನ್ನು ಕೇರಳ ಪೊಲೀಸರು ಹಾಗೂ ಅಬಕಾರಿ ಇಲಾಖೆ ತೀವ್ರಗೊಳಿಸಿವೆ.
ಮಾದಕ ದ್ರವ್ಯಗಳ ಮಾರಾಟದ ಆರೋಪಿಯನ್ನು ಕೋಯಿಕ್ಕೋಡ್ ನ ತಾಮರಸ್ಸೇರಿಯ ನಿವಾಸಿಯಾದ ಎಯ್ಯಾದನ್ ಶಾನಿದ್ (28) ಎಂದು ಪೊಲೀಸರು ಗುರುತಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಮಾದಕ ದ್ರವ್ಯಗಳ ತಪಾಸಣೆ ಅಭಿಯಾನದ ಭಾಗವಾಗಿ ಪೊಲೀಸರು ವಾಹನಗಳ ಪರಿಶೀಲನೆ ನಡೆಸುವಾಗ, ಶಾನಿದ್ ತನ್ನ ಬಳಿಯಿದ್ದ ಎರಡು ಸಣ್ಣ ಎಂಡಿಎಂಎ ಪಾಕೆಟ್ ಗಳನ್ನು ಸೇವಿಸಿದ್ದ ಎಂದು ಹೇಳಲಾಗಿದೆ.
ಆ ಪಾಕೆಟ್ ಗಳಲ್ಲಿ ಎಂಡಿಎಂಎ ಇತ್ತು ಎಂಬುದು ತಿಳಿಯುತ್ತಿದ್ದಂತೆಯೇ, ಆತನನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದ ಪೊಲೀಸರು, ಅಲ್ಲಿಂದ ಕೋಯಿಕ್ಕೋಡ್ ನಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದರು. ಎಂಡೋಸ್ಕೋಪಿಯ ಸಂದರ್ಭದಲ್ಲಿ ಆತನ ಹೊಟ್ಟೆಯಲ್ಲಿ ಗಮನಾರ್ಹ ಪ್ರಮಾಣದ ಎಂಡಿಎಂಎ ಕಣಗಳನ್ನು ಹೊಂದಿರುವ ಪಾಕೆಟ್ ಗಳಿರುವುದು ಕಂಡು ಬಂದಿತ್ತು. ಆದರೆ, ಶುಕ್ರವಾರ ರಾತ್ರಿ ಆತನ ಪರಿಸ್ಥಿತಿ ವಿಷಮಿಸಿದ್ದು, ಶನಿವಾರ ಮೃತಪಟ್ಟಿದ್ದಾನೆ. ಶಾನಿದ್ ಈ ಹಿಂದೆ ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತಾಮರಸ್ಸೇರಿ ಠಾಣೆಯ ಪೊಲೀಸರು, “ಮರಣೋತ್ತರ ಪರೀಕ್ಷಾ ವರದಿಯಿಂದ ಮಾತ್ರ ಆ ಪ್ಯಾಕೆಟ್ ಗಳಲ್ಲಿ ಏನಿತ್ತು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಹೊರಬರಲಿದೆ” ಎಂದು ಹೇಳಿದ್ದಾರೆ.
ಈ ನಡುವೆ, ನೆಡುಪುಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಬಾಡಿಗೆ ನಿವಾಸದಿಂದ ಕೃತಕ ಮಾದಕ ದ್ರವ್ಯಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಸಹೋದರರು ಸೇರಿದಂತೆ ಮೂವರನ್ನು ತ್ರಿಶೂರ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಸಹೋದರರನ್ನು ತೆಕ್ಕಲಿಯಕದನ್ ಅರುಣ್ (25) ಹಾಗೂ ಅಲನ್ (19) ಎಂದು ಗುರುತಿಸಲಾಗಿದೆ. ಅವರು ತಮ್ಮ ತಂದೆ ಮೃತಪಟ್ಟ ನಂತರ ಹಾಗೂ ತಮ್ಮ ತಾಯಿ ವಿದೇಶಕ್ಕೆ ತೆರಳಿದ ನಂತರ, ಮಾದಕ ದ್ರವ್ಯ ವ್ಯವಹಾರದಲ್ಲಿ ತೊಡಗಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳು ವಾಸವಿದ್ದ ಬಾಡಿಗೆ ಮನೆಯಿಂದ 4 ಕೆಜಿ ತೂಕದ ಗಾಂಜಾ ಹಾಗೂ 70 ಗ್ರಾಂ ತೂಕದ ಮಾದಕ ದ್ರವ್ಯದೊಂದಿಗೆ ಕೆಲವು ಮೊಬೈಲ್ ಸಾಧನಗಳು ಹಾಗೂ ಆಭರಣಗಳನ್ನು ತೂಕ ಮಾಡುವ ಯಂತ್ರವೊಂದನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.