ರಷ್ಯಾ- ಉಕ್ರೇನ್ ಯುದ್ಧದಿಂದ 10 ಭಾರತೀಯರು ವಾಪಾಸು : ವಿದೇಶಾಂಗ ಸಚಿವಾಲಯ
ವಾಪಾಸ್ಸಾದವ ಹೆಸರು ಬಹಿರಂಗಪಡಿಸಲು ಕುಟುಂಬಸ್ಥರ ಆಗ್ರಹ
PC : indianexpress.com
ಹೊಸದಿಲ್ಲಿ : ರಷ್ಯಾ ಉಕ್ರೇನ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಹತ್ತು ಮಂದಿ ಯುವಕರನ್ನು ಭಾರತಕ್ಕೆ ವಾಪಾಸು ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದ್ದು, ಈ ಹತ್ತು ಮಂದಿಯ ಹೆಸರು ಬಹಿರಂಗಪಡಿಸುವಂತೆ ರಷ್ಯಾದ ಯುದ್ಧದಲ್ಲಿ ಇನ್ನೂ ಸಿಲುಕಿಕೊಂಡಿರುವ ಭಾರತೀಯರ ಕುಟುಂಬದವರು ಆಗ್ರಹಿಸಿದ್ದಾರೆ. ತೆಲಂಗಾಣದ ನಾರಾಯಣಪೇಟೆ, ಕರ್ನಾಟಕದ ಗುಲ್ಬರ್ಗಾ, ಪಂಜಾಬ್ನ ಹೋಶಿಯಾರ್ಪುರ ಮತ್ತಿತರ ಕಡೆಗಳಿಂದ ರಷ್ಯಾಗೆ ತೆರಳಿರುವ ಯುವಕರ ಕುಟುಂಬಗಳನ್ನು ಸಂಪರ್ಕಿಸಿದ್ದು, ಯಾರು ವಾಪಸ್ಸಾಗಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ ಹಾಗೂ ಈ ಹತ್ತು ಮಂದಿಯಲ್ಲಿ ಯಾರನ್ನೂ ತಿಳಿದಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.
ನಾರಾಯಣಪೇಟೆಯ ಮೊಹ್ಮದ್ ಸುಫಿಯಾನ್ (23), ಗುಲ್ಬರ್ಗದ ಸೈಯ್ಯದ್ ಇಲಿಯಾಸ್ ಹುಸೈನಿ (22), ಅಬ್ದುಲ್ ನಯೀಮ್ (23), ಹೋಶಿಯಾರ್ಪುರದ ಗುರ್ಪ್ರೀತ್ ಸಿಂಗ್ (23) ಇನ್ನೂ ಯುದ್ಧದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಕೆಲ ಮಂದಿಯನ್ನು ಭಾರತಕ್ಕೆ ವಾಪಾಸು ಕರೆತರಲಾಗಿದೆ ಎಮಬ ಮಾಹಿತಿ ತಿಳಿದು ನಿರಾಳವಾಯಿತು. ಆದರೆ ನನ್ನ ಸಹೋರ ಇನ್ನೂ ಬಂದಿಲ್ಲ ಅಥವಾ ಗುಲ್ಬರ್ಗದ ಯುಕರು ಕೂಡಾ ಬಂದಿಲ್ಲ. ನಿಮ್ಮ ಸಹೋದರ ಬಂದಿದ್ದಾರೆಯೇ ಎಂದು ಎಲ್ಲರೂ ಕೇಳುತ್ತಿದ್ದಾರೆ. ಎಂಇಎ ಅಧಿಕೃತವಾಗಿ ವಾಪಸ್ಸಾದವರ ಹೆಸರು ಬಹಿರಂಗಪಡಿಸಬೇಕು ಎಂದು ಸುಫಿಯಾನ್ ಅವರ ಸಹೋದರ ಸೈಯ್ಯದ್ ಸಲ್ಮಾನ್ ಆಗ್ರಹಿಸಿದ್ದಾರೆ.