ಪ್ರಶಾಂತ್ ಕಿಶೋರ್ ಅನಿರ್ದಿಷ್ಟಾವಧಿ ಉಪವಾಸ ನಡುವೆ ವಿವಾದಕ್ಕೆ ಕಾರಣವಾದ ಅವರ ಐಷಾರಾಮಿ ವ್ಯಾನ್!
PC : indiatoday.in
ಪಾಟ್ನಾ: ರಾಜ್ಯ ನಾಗರಿಕ ಸೇವಾ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಪಟ್ಟು ಹಿಡಿದಿರುವ ಬಿಹಾರದ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಚುನಾವಣಾ ತಂತ್ರಜ್ಞ-ರಾಜಕಾರಣಿ ಪ್ರಶಾಂತ್ ಕಿಶೋರ್ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವು ಅವರ ಐಷಾರಾಮಿ ವ್ಯಾನ್ ವಿವಾದಕ್ಕೆ ಕಾರಣವಾಗುವುದರೊಂದಿಗೆ ಅನಿರೀಕ್ಷಿತ ತಿರುವನ್ನು ಪಡೆದುಕೊಂಡಿದೆ.
ಜನ ಸುರಾಜ್ ಪಕ್ಷದ ಸಂಸ್ಥಾಪಕ ಕಿಶೋರ ಅವರು ಗುರುವಾರದಿಂದ ಪಾಟ್ನಾದ ಗಾಂಧಿ ಮೈದಾನದಲ್ಲಿಯ ಮಹಾತ್ಮಾ ಗಾಂಧಿಯವರ ಪ್ರತಿಮೆಯ ಬಳಿ ಕುಳಿತು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಡಿ.13ರಂದು ನಡೆದಿದ್ದ ಬಿಹಾರ ಲೋಕಸೇವಾ ಆಯೋಗ(ಬಿಪಿಎಸ್ಸಿ)ದ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹಲವಾರು ವಿದ್ಯಾರ್ಥಿಗಳು ಬೆಂಬಲಿಸಿದ್ದಾರೆ.
ಕಿಶೋರ ಅನಿರ್ದಿಷ್ಟಾವಧಿ ಉಪವಾಸ ನಡುವೆ ಪ್ರತಿಭಟನಾ ಸ್ಥಳದಲ್ಲಿ ನಿಲ್ಲಿಸಲಾಗಿರುವ ಅವರ ಐಷಾರಾಮಿ ವ್ಯಾನಿನ ಚಿತ್ರಗಳು ವೈರಲ್ ಆಗಿದ್ದು, ಪ್ರತಿಭಟನೆಯಲ್ಲಿ ಅವರ ಉಪಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಹಲವಾರು ಕೋಟಿ ರೂ.ಮೌಲ್ಯದ್ದೆನ್ನಲಾಗಿರುವ ಈ ವ್ಯಾನ್ ಏರ್ ಕಂಡಿಷನರ್, ಅಡುಗೆ ಕೋಣೆ ಮತ್ತು ಮಲಗುವ ಸ್ಥಳ ಸೇರಿದಂತೆ ಮನೆಯಂತಹ ಐಷಾರಾಮಿ ವ್ಯವಸ್ಥೆಗಳನ್ನು ಒಳಗೊಂಡಿದೆ.
ವಿವಾದವನ್ನು ತಳ್ಳಿಹಾಕಿರುವ ಜನ ಸುರಾಜ್ ಪಕ್ಷದ ವಕ್ತಾರ ವಿವೇಕ ಅವರು, ಇದೊಂದು ವಿಷಯವೇ ಅಲ್ಲ, ಅಭ್ಯರ್ಥಿಗಳ ಭವಿಷ್ಯ ಮುಖ್ಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ರಾಜಕೀಯ ವಿರೋಧಿಗಳು ಕಿಶೋರ್ ಹೆಸರನ್ನು ಕೆಡಿಸಲು ಐಷಾರಾಮಿ ವ್ಯಾನ್ ಅನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ನ್ಯಾಯಕ್ಕಾಗಿ ವಿದ್ಯಾರ್ಥಿಗಳ ಬೇಡಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು ಎಂದು ಹೇಳಿದ್ದಾರೆ.
ಕಿಶೋರ್ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿರುವ ಗಾಂಧಿ ಮೈದಾನದಿಂದ ಕೆಲವೇ ಕಿ.ಮೀ.ದೂರದ ಇನ್ನೊಂದು ಪ್ರತಿಭಟನಾ ಸ್ಥಳದಲ್ಲಿ ಅಭ್ಯರ್ಥಿಗಳು ಕಳೆದ ಎರಡು ವಾರಗಳಿಂದಲೂ ನಿರಂತರ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
‘ನಾನು ನನ್ನೆಲ್ಲ ಶಕ್ತಿಯೊಂದಿಗೆ ಈ ವಿದ್ಯಾರ್ಥಿಗಳ ಜೊತೆಯಲ್ಲಿದ್ದೇನೆ, ಈ ಸಮಸ್ಯೆ ಬಗೆಹರಿಯುವವರೆಗೂ ನಾನು ಆಮರಣಾಂತ ಉಪವಾಸವನ್ನು ನಡೆಸುತ್ತೇನೆ ’ ಎಂದು ಕಿಶೋರ್ ಗುರುವಾರ ಹೇಳಿದ್ದರು.