ಮಧ್ಯಪ್ರದೇಶದಲ್ಲಿ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆಶ್ರಮದ ಶಿಕ್ಷಕನ ಬಂಧನ
ಕಳೆದ ವರ್ಷ ಅತ್ಯಾಚಾರ ಸಂತ್ರಸ್ತೆಗೆ ಸಹಾಯ ಮಾಡಿದ್ದಕ್ಕಾಗಿ ಹೀರೋ ಎಂದು ಪ್ರಶಂಸಿಸಲ್ಪಟ್ಟಿದ್ದ ಶಿಕ್ಷಕ
ಸಾಂದರ್ಭಿಕ ಚಿತ್ರ | PC : NDTV
ಭೋಪಾಲ್ : ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ರಿಕ್ಷಾ ಚಾಲಕನಿಂದ ಅತ್ಯಾಚಾರಕ್ಕೊಳಗಾದ ಬಾಲಕಿ ಮನೆ ಮನೆಗೆ ಹೋಗಿ ಸಹಾಯಕ್ಕಾಗಿ ಯಾಚಿಸುತ್ತಿದ್ದಾಗ ಉಜ್ಜಯಿನಿ ಆಶ್ರಮದ ಶಿಕ್ಷಕರೊಬ್ಬರು ಆಕೆಗೆ ಸಹಾಯ ಹಸ್ತ ಚಾಚಿ, ಹೀರೋ ಎನಿಸಿಕೊಂಡಿದ್ದರು. ಈ ಬಾರಿ ಅದೇ ಶಿಕ್ಷಕನನ್ನು ಆಶ್ರಮದಲ್ಲಿ ಕನಿಷ್ಠ ಮೂವರು ಅಪ್ರಾಪ್ತ ಬಾಲಕರನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ವರದಿಯಾಗಿದೆ.
21 ವರ್ಷದ ಶಿಕ್ಷಕ ರಾಹುಲ್ ಶರ್ಮಾ ಮತ್ತು ಆಶ್ರಮದ ಉಸ್ತುವಾರಿ ಅಜಯ್ ಠಾಕೂರ್ ವಿರುದ್ಧ ಪೊಲೀಸರು ಐಪಿಸಿ ಮತ್ತು ಪೋಕ್ಸೊ ಕಾಯ್ದೆಯಡಿ ಮೂರು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹಲವಾರು ಸಂತ್ರಸ್ತರು ಇನ್ನೂ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದಿ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಉಜ್ಜಯಿನಿ ಎಸ್ಪಿ ಪ್ರದೀಪ್ ಶರ್ಮಾ, “ಇಲ್ಲಿಯವರೆಗೆ ಮೂವರು ಮಕ್ಕಳು ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದೇವೆ” ಎಂದರು.
ಸೆಪ್ಟೆಂಬರ್ 2023 ರಲ್ಲಿ, ಆಟೋರಿಕ್ಷಾ ಚಾಲಕನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ ರಕ್ತಸಿಕ್ತವಾಗಿ ಅರೆಬೆತ್ತಲೆ ಬಟ್ಟೆಯಲ್ಲಿ ಸಹಾಯಕ್ಕಾಗಿ ಮನೆಮನೆಯ ಬಾಗಿಲು ಬಡಿಯುತ್ತಿದ್ದ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದವು. ಒಂದು ಗಂಟೆ ಕಾಲ ಆ ಪ್ರದೇಶದಲ್ಲಿ ಆಕೆ ಸುತ್ತಾಡಿದರೂ ಯಾರೂ ಆಕೆಯ ಸಹಾಯಕ್ಕೆ ಬರಲಿಲ್ಲ ಎಂದು ದೃಶ್ಯಾವಳಿಗಳು ತೋರಿಸಿದ್ದವು. ಆಶ್ರಮದ ಹೊರಗೆ ಬಾಲಕಿಯನ್ನು ನೋಡಿದ ಬಳಿಕ ಆಕೆಗೆ ಸಹಾಯ ಮಾಡಿದ್ದಾಗಿ ಶರ್ಮಾ ಹೇಳಿದ್ದರು. ಆದರೆ ಪೊಲೀಸರು ಉಜ್ಜಯಿನಿ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ, ಪೊಲೀಸರು ಆರೋಪಿಯು ಸಹಾಯ ಮಾಡಿದ್ದಕ್ಕೆ ಯಾವುದೇ ಪುರಾವೆಯಿಲ್ಲ. ನಾವು 200 ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ ಎಂದಿದ್ದಾರೆ.
ಪೊಲೀಸರ ಪ್ರಕಾರ, ಬಡ ಕುಟುಂಬದ ಮಕ್ಕಳನ್ನು ರಾಜ್ಯ ಸಂಸ್ಕೃತ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಈ ಆಶ್ರಮಕ್ಕೆ ಸೇರಿಸಿದ್ದಾರೆ. ಸುಮಾರು 10 ದಿನಗಳ ಹಿಂದೆ, ಠಾಕೂರ್ ನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತ ಬಾಲಕ ಮನೆಗೆ ಹಿಂದಿರುಗಿದಾಗ ತನ್ನ ತಾಯಿಗೆ ಈ ಕೃತ್ಯದ ಬಗ್ಗೆ ದೂರು ನೀಡಿದ್ದಾನೆ. “ಮಗುವಿನ ಹೆತ್ತವರು ಆಶ್ರಮಕ್ಕೆ ಬಂದು ಪರೀಶಿಲನೆ ನಡೆಸಿದ ಬಳಿಕ, ಆಶ್ರಮದ ಉದ್ಯೋಗಿ ಠಾಕೂರ್ ಅವರನ್ನು ವಜಾಗೊಳಿಸಲಾಯಿತು. ಆ ಬಳಿಕ ಇನ್ನೂ ಹಲವಾರು ಪೋಷಕರು ಆಶ್ರಮಕ್ಕೆ ಭೇಟಿ ನೀಡಿ ಆರೋಪ ಮಾಡಿದ್ದಾರೆ,'' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.