ಏಶ್ಯನ್ ಗೇಮ್ಸ್: ಅರುಣಾಚಲದ ಕ್ರೀಡಾಪಟುಗಳಿಗೆ ಅನುಮತಿ ನಿರಾಕರಿಸಿದ ಚೀನಾ
ಭಾರತದಿಂದ ತೀವ್ರ ಪ್ರತಿಭಟನೆ; ಚೀನಾ ಪ್ರವಾಸ ರದ್ದುಪಡಿಸಿದ ಸಚಿವ ಅನುರಾಗ್ ಠಾಕೂರ್
ಅನುರಾಗ್ ಠಾಕೂರ್ | Photo: PTI
ಹೊಸದಿಲ್ಲಿ: ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರುಣಾಚಲ ಪ್ರದೇಶದ ಮೂವರು ಮಹಿಳಾ ವುಶು ಕ್ರೀಡಾಪಟುಗಳಿಗೆ ಮಾನ್ಯತೆ ಹಾಗೂ ಪ್ರವೇಶಾನುಮತಿ ನೀಡಲು ಚೀನಾವು ನಿರಾಕರಿಸಿದ್ದು, ಭಾರತವು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ.ಈಶಾನ್ಯ ಭಾರತದ ರಾಜ್ಯವಾದ ಅರುಣಾಚಲ ಪ್ರದೇಶವು ತನಗೆ ಸೇರಿದ್ದೆಂದು ಚೀನಾ ವಾದಿಸುತ್ತಿದ್ದು, ಅದನ್ನು ದಕ್ಷಿಣ ಟಿಬೆಟ್ ಎಂಬುದಾಗಿ ಕರೆಯುತ್ತಿದೆ.
ಚೀನಾದ ಹಾಂಗ್ಜೌನಲ್ಲಿ ಏಶ್ಯನ್ ಗೇಮ್ಸ್ ಕ್ರೀಡಾಕೂಟವು ಶನಿವಾರದಿಂದ ಆರಂಭವಾಗಲಿದೆ, ಅತಿಥೇಯ ರಾಷ್ಟ್ರವಾದ ಚೀನಾವು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳಾ ವುಶು ಸಮರಕಲೆ ಅಥ್ಲೀಟ್ ಗಳು, ಕ್ರೀಡಾಕೂಟದಿಂದ ಹೊರಬೀಳಬೇಕಾಗಿದೆ.
ಅರುಣಾಚಲದ ಕ್ರೀಡಾಳುಗಳಿಗೆ ಮಾನ್ಯತೆಯನ್ನು ನಿರಾಕರಿಸಿದ ಚೀನಾದ ನಡೆಯನ್ನು ಭಾರತವು ಬಲವಾಗಿ ಖಂಡಿಸಿದೆ. ಚೀನಾದ ಕ್ರಮವು ಏಶ್ಯನ್ ಗೇಮ್ಸ್ ಆಶಯ ಹಾಗೂ ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ಕ್ರೀಡಾಕೂಟದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ತನ್ನ ಹಿತಾಸಕ್ತಿಗಳನ್ನು ಕಾಪಾಡುವ ಹಕ್ಕನ್ನು ಭಾರತವು ಕಾಯ್ದಿರಿಸಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ತಿ ಹೇಳಿದ್ದಾರೆ.
ಏಶ್ಯದ ಒಲಿಂಪಿಕ್ ಮಂಡಳಿಯ ಕಾರ್ಯನಿರತ ಅಧ್ಯಕ್ಷ ರಣಧೀರ್ಸಿಂಗ್ ಹೇಳಿಕೆಯೊಂದನ್ನು ನೀಡಿದ್ದು, “ಏಶ್ಯನ್ ಗೇಮ್ಸ್ ಕ್ರಿಯಾ ಸಮಿತಿ ಜೊತೆ ಗುರುವಾರ ನಾವು ಸಭೆ ನಡೆಸಿದ್ದು,ಅದರಲ್ಲಿ ಈ ವಿಚಾರವನ್ನು ಪ್ರಸ್ತಾವಿಸಲಾಗಿದೆ. ಅವರು ಈ ವಿಷಯವನ್ನು ಚೀನಾ ಸರಕಾರದ ಮುಂದಿಡಲಿದ್ದು, ಏಶ್ಯ ಒಲಿಂಪಿಕ್ ಮಂಡಳಿಯೂ ಅದನ್ನು ಸರಕಾರದ ಮುಂದಿಡಲಿದೆ’’ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಮೂವರು ಮಹಿಳಾ ವುಶು ಫೈಟರ್ ಗಳು ಸೇರಿದಂತೆ 10 ಮಂದಿ ಸದಸ್ಯರ ಭಾರತೀಯ ವುಶು ತಂಡವು, ತನ್ನ ಕೋಚಿಂಗ್ ಸಿಬ್ಬಂದಿಯ ಜೊತೆ ಬುಧವಾರ ಚೀನಾಕ್ಕೆ ಪ್ರಯಾಣಿಸಲು ಸಿದ್ಧವಾಗಿತ್ತು ಎನ್ನಲಾಗಿದೆ.
ಈ ಮೂವರು ವುಶು ಅಥ್ಲೀಟ್ ಗಳಿಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಹಾಂಗ್ಝೌ ಏಶ್ಯನ್ ಗೇಮ್ಸ್ ಸಂಘಟನಾ ಸಮಿತಿಯು ಅನುಮತಿ ನೀಡಿತ್ತು. ಆದರೆ ಚೀನಾವನ್ನು ಪ್ರವೇಶಿಸಲು ವೀಸಾಕ್ಕೆ ಸಮಾನವಾಗಿರುವಂತಹ ತಮ್ಮ ಮಾನ್ಯತಾಪತ್ರಗಳನ್ನು ಡೌನ್ಲೋಡ್ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ.
ಅರುಣಾಚಲದ ಅಥ್ಲೀಟ್ಗಳು ಅನುಮತಿ ನಿರಾಕರಣೆಯನ್ನು ಸಮರ್ಥಿಸಿದ ಚೀನಾ
ಅರುಣಾಚಲದ ಮೂವರು ಮಹಿಳಾ ಕ್ರೀಡಾಪಟುಗಳಿಗೆ ಮಾನ್ಯತೆ ನಿರಾಕರಿಸಿರುವ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ್ತಾ ‘‘ ಹಾಂಗ್ಝೌಗೆ ಕಾನೂನುಬದ್ಧ ದಾಖಲೆಗಳೊಂದಿಗೆ ಆಗಮಿಸುವ ಎಲ್ಲಾ ದೇಶಗಳ ಅತ್ಲೀಟ್ ಗಳನ್ನು ಚೀನಾವು ಸ್ವಾಗತಿಸುತ್ತದೆ. ಆದರೆ ನೀವು ಉಲ್ಲೇಖಿಸಿರವಂತಹ ತಥಾಕಥಿತ ಅರುಣಾಚಲ ಪ್ರದೇಶಕ್ಕೆ ಚೀನಾ ಸರಕಾರವು ಮಾನ್ಯತೆ ನೀಡುವುದಿಲ್ಲ’’ ಎಂದು ಹೇಳಿದ್ದಾರೆ.
ಈ ವರ್ಷದ ಜುಲೈನಲ್ಲಿ ಚೀನಾದ ಚೆಂಗ್ಡು ನಗರದಲ್ಲಿ ನಡೆದ ವಿಶ್ವವಿದ್ಯಾನಿಲಯ ಮಟ್ಟದ ವುಶು ಕ್ರೀಡಾಕೂಟದಲ್ಲಿಯೂ ಪಾಲ್ಗೊಳ್ಳಲಿದ್ದ ಅರುಣಾಚಲದ ಈ ಮೂವರು ಮಹಿಳಾ ಅತ್ಲೀಟ್ಗಳಿಗೆ ಮೊಹರು ಮಾಡಿದ ವೀಸಾ (ಸ್ಟೇಪಲ್ಡ್)ವೀಸಾಗಳನ್ನು ನೀಡುವ ಬದಲು ಪೇಸ್ಟ್ಡ್ ವೀಸಾ (ಮೊಹರು ಮಾಡದೆ, ಚೀಟಿಯನ್ನು ಲಗತ್ತಿಸಿರುವ ವೀಸಾ)ವನ್ನು ನೀಡಿದ್ದರಿಂದ ಅವರು ಚೀನಾಕ್ಕೆ ಪ್ರಯಾಣಿಸಿರಲಿಲ್ಲ.
ಅನುರಾಗ್ ಠಾಕೂರ್ ಚೀನಾ ಪ್ರವಾಸ ರದ್ದು
19ನೇ ಏಶ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅರುಣಾಚಲ ಪ್ರದೇಶದ ಮೂವರು ಮಹಿಳಾ ವುಶು ಕ್ರೀಡಾಪಟುಗಳಿಗೆ ಮಾನ್ಯತೆಯನ್ನು ಚೀನಾವು ನಿರಾಕರಿಸಿರುವುದನ್ನು ವಿರೋಧಿಸಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತನ್ನ ಚೀನಾ ಭೇಟಿಯನ್ನು ರದ್ದುಪಡಿಸಿದ್ದಾರೆ. ಶನಿವಾರ ಹಾಂಗ್ಝೌನಲ್ಲಿ ಆರಂಭವಾಗಲಿರುವ ಏಶ್ಯನ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅನುರಾಗ್ ಠಾಕೂರ್ ಚೀನಾಕ್ಕೆ ತೆರಳಲಿದ್ದರು.
ಅರುಣಾಚಲ: ಚೀನಾದ ಕ್ಯಾತೆ
ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿ ಚೀನಾವು ಭಾರತದೊಂದಿಗೆ ಗಡಿವಿವಾದವನ್ನು ಕೆದಕುತ್ತಿದೆ. ಇತ್ತೀಚೆಗೆ ಅದು ಅರುಣಾಚಲ ಪ್ರದೇಶವನ್ನು ಸೇರ್ಪಡೆಗೊಳಿಸಿದ ನಕ್ಷೆಯೊಂದನ್ನು ಬಿಡುಗಡೆಗೊಳಿಸಿತ್ತು. ನಕ್ಷೆಯಲ್ಲಿ ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂಬುದಾಗಿ ಹೆಸರಿಸಿತು.
ಈ ವರ್ಷದ ಆರಂಭದಲ್ಲಿ ಚೀನಾವು ಅರುಣಾಚಲದ 11 ಪ್ರದೇಶಗಳನ್ನು ಮರುನಾಮಕರಣಗೊಳಿಸಿತ್ತು. ಆದರೆ ಭಾರತವು ಬೀಜಿಂಗ್ಈ ಕ್ರಮಗಳನ್ನು ತೀವ್ರವಾಗಿ ಖಂಡಿಸಿದ್ದಲ್ಲದೆ, ಅರುಣಾಚಲ ಪ್ರದೇಶವು ಯಾವತ್ತಗೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಲಿದೆ ಎಂದು ತಿಳಿಸಿತ್ತು.