ರಾಜ್ಯಗಳು ತಮ್ಮ ತೆರಿಗೆ ಕೊಡುಗೆಗೆ ಅನುಗುಣವಾಗಿ ಅನುದಾನವನ್ನು ಕೇಳುತ್ತಿರುವುದು ‘ಕ್ಷುಲ್ಲಕ ಚಿಂತನೆ’ : ಕೇಂದ್ರ ಸಚಿವ ಪಿಯೂಷ್ ಗೋಯಲ್

ಪಿಯೂಷ್ ಗೋಯಲ್
ಮುಂಬೈ: ಕೇಂದ್ರ ಸರಕಾರಕ್ಕೆ ಸಲ್ಲಿಸುವ ತೆರಿಗೆಗೆ ಅನುಗುಣವಾಗಿ ತಮಗೆ ಕೇಂದ್ರೀಯ ಅನುದಾನ ದೊರೆಯಬೇಕು ಎಂಬ ಕೆಲವು ರಾಜ್ಯಗಳ ಬೇಡಿಕೆಯು ಕ್ಷುಲ್ಲಕ ಚಿಂತನೆಯಾಗಿದೆ ಮತ್ತು ದುರದೃಷ್ಟಕರವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಹೇಳಿದ್ದಾರೆ.
ದೇಶವು ಅಭಿವೃದ್ಧಿ ಹೊಂದಬೇಕಾದರೆ ಬಿಹಾರ,ಪಶ್ಚಿಮ ಬಂಗಾಳ,ಒಡಿಶಾ ಮತ್ತು ಜಾರ್ಖಂಡ್ನಂತಹ ಈಶಾನ್ಯ ಮತ್ತು ಪೂರ್ವ ಭಾರತದ ಎಂಟು ರಾಜ್ಯಗಳು ಅಭಿವೃದ್ಧಿಗೊಳ್ಳಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ನಿಲುವಾಗಿದೆ ಎಂದು ಶನಿವಾರ ಇಲ್ಲಿ ‘ರಾಷ್ಟ್ರೀಯ ಏಕಾತ್ಮತಾ ಯಾತ್ರಾ 2025’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಗೋಯಲ್ ಹೇಳಿದರು.
ಕಳೆದ 11 ವರ್ಷಗಳಿಂದ ಮಹಾಭಾರತದ ಅರ್ಜುನನ ಗುರಿಯಂತೆ ಮೋದಿ ಸರಕಾರದ ‘ಲೇಸರ್ ಫೋಕಸ್’ ಈಶಾನ್ಯ ಮತ್ತು ಪೂರ್ವ ರಾಜ್ಯಗಳ ಮೇಲಿದೆ ಎಂದರು.
ದುರದೃಷ್ಟಕರವೆಂದರೆ ಕೆಲವು ರಾಜ್ಯಗಳು ಮತ್ತು ಕೆಲವು ನಾಯಕರು...ನಾನಿದನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ,ಆದರೆ ಮಹಾರಾಷ್ಟ್ರದ ಕೆಲವು ನಾಯಕರು ಈ ವಿಷಯವನ್ನು ಎತ್ತುತ್ತಿದ್ದಾರೆ. ಎರಡೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಹಿಂದಿನ ಸರಕಾರದ ನಾಯಕರು ರಾಜ್ಯದಿಂದ ಪಾವತಿಯಾದ ತೆರಿಗೆಯನ್ನು ಲೆಕ್ಕ ಹಾಕುತ್ತಿದ್ದರು ಮತ್ತು ಕೇಂದ್ರವು ಅನುದಾನದ ರೂಪದಲ್ಲಿ ಅಷ್ಟು ಮೊತ್ತವನ್ನು ರಾಜ್ಯಕ್ಕೆ ಮರಳಿಸಬೇಕು ಎಂದು ಬೇಡಿಕೆ ಇಡುತ್ತಿದ್ದರು ಎಂದು ಗೋಯಲ್ ಹೇಳಿದರು. ಮಹಾರಾಷ್ಟ್ರದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಉದ್ಧವ ಠಾಕ್ರೆ ನೇತೃತ್ವದ ಮಹಾ ವಿಕಾಸ ಅಘಾಡಿ(ಎಂವಿಎ) ಸರಕಾರವನ್ನು ಉಲ್ಲೇಖಿಸಿ ಮುಂಬೈ ಉತ್ತರ ಸಂಸದರಾಗಿರುವ ಅವರ ಈ ಹೇಳಿಕೆ ಹೊರಬಿದ್ದಿದೆ.
ಕರ್ನಾಟಕ,ತಮಿಳುನಾಡು,ತೆಲಂಗಾಣದಂತಹ ಕೆಲವು ರಾಜ್ಯಗಳು ತಾವು ಪಾವತಿಸಿರುವ ತೆರಿಗೆ ಹಣ ತಮಗೆ ವಾಪಸ್ ದೊರೆಯಬೇಕು ಎಂದು ಆಗ್ರಹಿಸುತ್ತಿವೆ. ಇದಕ್ಕಿಂತ ಸಣ್ಣತನದ ಚಿಂತನೆ ಇನ್ನೊಂದಿರಲು ಸಾಧ್ಯವಿಲ್ಲ,ಇದಕ್ಕಿಂತ ಹೆಚ್ಚು ದುರದೃಷ್ಟಕರವಾಗಿರುವುದೂ ಇರಲು ಸಾಧ್ಯವಿಲ್ಲ ಎಂದು ಹೇಳಿದ ಗೋಯಲ್,ಆದರೆ ಮಹಾರಾಷ್ಟ್ರದಲ್ಲಿಯ ಪ್ರಸ್ತುತ ಬಿಜೆಪಿ ನೇತೃತ್ವದ ಸರಕಾರವು ಈಶಾನ್ಯ ಭಾರತದ ಬಗ್ಗೆ ಬಹಳ ಸಂವೇದನೆಯನ್ನು ಹೊಂದಿದ್ದು,ತೆರಿಗೆ ಪಾಲಿನ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ ಎಂದರು.
ಮೋದಿ ಸರಕಾರದಡಿ ಈಶಾನ್ಯ ರಾಜ್ಯಗಳ ರಾಜಧಾನಿಗಳಿಗೆ ರೈಲ್ವೆ ಸಂಪರ್ಕ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಮತ್ತು ಹೆದ್ದಾರಿಗಳ ಜಾಲವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಮೋದಿಯವರು 65ಕ್ಕೂ ಅಧಿಕ ಸಲ ಈಶಾನ್ಯ ಭಾರತಕ್ಕೆ ಭೇಟಿ ನೀಡಿದ್ದಾರೆ ಎಂದ ಗೋಯಲ್,ಅದರ ಸೌಂದರ್ಯ ಮತ್ತು ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಲು ಒಮ್ಮೆಯಾದರೂ ಆ ಪ್ರದೇಶಕ್ಕೆ ಭೇಟಿ ನೀಡುವಂತೆ ಜನರನ್ನು ಆಗ್ರಹಿಸಿದರು.