ಅಸ್ಸಾಂ | ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರ ಮೃತದೇಹ ಪತ್ತೆ; ಮುಂದುವರಿದ ರಕ್ಷಣಾ ಕಾರ್ಯ
PC : PTI
ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಮೃತದೇಹವನ್ನು ಶನಿವಾರ ಮೇಲಕ್ಕೆತ್ತಲಾಗಿದ್ದು, ಈವರೆಗೆ ಒಟ್ಟು ನಾಲ್ವರ ಮೃತದೇಹವನ್ನು ಹೊರತೆಗೆಯಲಾಗಿದೆ. ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಬೆಳಗ್ಗೆ ಗಣಿಯಿಂದ ಪತ್ತೆಯಾದ ಮೂವರು ಕಾರ್ಮಿಕರಲ್ಲಿ ಓರ್ವ ದಿಮಾ ಹಸಾವೊ ನಿವಾಸಿ 27 ವರ್ಷದ ಲಿಜೆನ್ ಮಗರ್ ಎಂದು ಗುರುತಿಸಲಾಗಿದೆ. ಇನ್ನೆರಡು ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.
ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಕಾರ್ಮಿಕರಿಗಾಗಿ ಹುಡುಕಾಟವು 6ನೇ ದಿನಕ್ಕೆ ಕಾಲಿಟ್ಟಿದೆ. ಸ್ಥಳದಲ್ಲಿ ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಸೇರಿದಂತೆ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ನಡೆಸುತ್ತಿದೆ. ವಿಶೇಷ ಯಂತ್ರಗಳ ಮೂಲಕ ಸುಮಾರು 310 ಅಡಿ ಆಳದ ಕ್ವಾರಿಯಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ, ಈ ಮೊದಲು ನೇಪಾಳ ಮೂಲದ ಓರ್ವ ಕಾರ್ಮಿಕನ ಮೃತದೇಹವನ್ನು ಮೇಲಕ್ಕೆತ್ತಲಾಗಿತ್ತು. ಶನಿವಾರ ಬೆಳಿಗ್ಗೆ ಸ್ಥಳದಿಂದ ಮತ್ತೊಂದು ಮೃತದೇಹವನ್ನು ಮೇಲಕ್ಕೆತ್ತಲಾಗಿತ್ತು. ಇದೀಗ ಒಟ್ಟು ನಾಲ್ವರು ಕಾರ್ಮಿಕರ ಮೃತದೇಹವನ್ನು ಹೊರತೆಗೆಯಲಾಗಿದೆ. ಇನ್ನು ಐವರಿಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ.