28 ಮುಸ್ಲಿಮರಿಗೆ ವಿದೇಶಿಗರೆಂಬ ಹಣೆಪಟ್ಟಿ ಕಟ್ಟಿ ಬಂಧನ ಶಿಬಿರಕ್ಕೆ ರವಾನಿಸಿದ ಅಸ್ಸಾಂ ಸರಕಾರ!
►ಪ್ರತಿ ಮನೆಯಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಿ ವಿದೇಶಿಗಳು ಎಂದ ಸರಕಾರ! ►ಹಿಂದೂ ವಲಸಿಗರು ಬರಲಿ, ಮುಸ್ಲಿಮರು ಬೇಡ ಎಂಬ ನೀತಿ
PC : deccanherald
ಗುವಾಹಟಿ : ಅಸ್ಸಾಂ ನಲ್ಲಿ ವಲಸಿಗರ ವಿರುದ್ಧ ಇರುವ ಜನರ ಅಸಮಾಧಾನವನ್ನು ರಾಜಕೀಯ ಲಾಭಕ್ಕಾಗಿ ಮುಸ್ಲಿಂ ದ್ವೇಷದ ನೀತಿಯಾಗಿ ಅಲ್ಲಿನ ಬಿಜೆಪಿ ಸರಕಾರ ಜಾರಿ ಮಾಡುತ್ತಿದೆ. ಅಸ್ಸಾಂ ಸಿಎಂ ಹಿಮಂತಾ ಬಿಸ್ವ ಶರ್ಮಾ ನಿರಂತರ ಮುಸ್ಲಿಂ ವಿರೋಧಿ ದ್ವೇಷ ಹೇಳಿಕೆ ಕೊಡುತ್ತಿರುವ ನಡುವೆಯೇ 28 ಮಂದಿ ಬಂಗಾಳಿ ಮುಸ್ಲಿಮರನ್ನು ಬಂಧನ ಶಿಬಿರಕ್ಕೆ ಕಳಿಸಲಾಗಿದೆ.
ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿದ ನಂತರ ಈ ದಿಢೀರ್ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಅಸ್ಸಾಮಿ ಜನರು ವಲಸಿಗರು ಬೇಡ ಎಂದು ಹೇಳಿದರೆ, ಬಿಜೆಪಿ ಸರಕಾರ ಅದನ್ನು ಮುಸ್ಲಿಂ ವಲಸಿಗರು ಬೇಡ ಎಂದು ಬದಲಾಯಿಸಿಕೊಂಡಿದೆ. ಹಿಂದೂ ವಲಸಿಗರಿಗೆ ಬೇಕಾದ ಸೌಲಭ್ಯ ಮಾಡಿ ಕೊಡುವುದಾಗಿ ಅದು ಅಧಿಕೃತವಾಗಿಯೇ ಘೋಷಿಸಿದೆ.
ಅಸ್ಸಾಂನ ಬಾರ್ಪೇಟಾದಲ್ಲಿರುವ ವಿದೇಶಿಯರ ನ್ಯಾಯಮಂಡಳಿಯು ವಿದೇಶಿಯರೆಂದು ಘೋಷಿಸಿದ 28 ಬಂಗಾಳಿ ಮುಸ್ಲಿಮರನ್ನು ಸೋಮವಾರ ಗೋಲ್ಪಾರಾದಲ್ಲಿರುವ ಬಂಧನ ಶಿಬಿರಕ್ಕೆ ಕಳುಹಿಸಲಾಗಿದೆ. 9 ಮಹಿಳೆಯರು ಮತ್ತು 19 ಪುರುಷರನ್ನು ಒಳಗೊಂಡ ತಂಡವನ್ನು ಬಾರ್ಪೇಟಾ ಪೊಲೀಸ್ ಅಧೀಕ್ಷಕರ ಕಚೇರಿಯಿಂದ ಕುಟುಂಬಿಕರ ದುಃಖ ಹಾಗು ಆಕ್ರಂದನದ ನಡುವೆ ಭಾರೀ ಭದ್ರತೆಯಲ್ಲಿ ಕರೆದುಕೊಂಡು ಹೋಗಲಾಯಿತು.
ಗೋಲ್ಪಾರಾದಲ್ಲಿರುವ ಬಂಧನ ಶಿಬಿರ ಭಾರತದ ಪ್ರಪ್ರಥಮ ಹಾಗು ಅತಿ ದೊಡ್ಡ ಅಕ್ರಮ ವಲಸಿಗರ ಬಂಧನ ಕೇಂದ್ರವಾಗಿದೆ. ಇದು ಏಳು ಫುಟ್ಬಾಲ್ ಸ್ಟೇಡಿಯಂ ಗಳಷ್ಟು ದೊಡ್ಡದು ಎಂದು ಈ ಹಿಂದೆ ವರದಿಯಾಗಿತ್ತು. ಇಂತಹ ಬಂಧನ ಕೇಂದ್ರಗಳಲ್ಲಿ ಇರಿಸಿದವರ ಸಾವುಗಳ ಬಗ್ಗೆ ಸಂಸತ್ತಿನಲ್ಲೂ ಚರ್ಚೆಯಾಗಿತ್ತು. ಆಗ ಸರಕಾರ ಅವರು ಸಹಜ ಸಾವು ಕಂಡಿದ್ದಾರೆ ವಿನಃ ಯಾವುದೇ ಭಯದಿಂದಲ್ಲ ಎಂದು ಹೇಳಿತ್ತು.
ಸುದೀರ್ಘ ಕಾನೂನು ಪ್ರಕ್ರಿಯೆಯ ನಂತರ ಈ ಕ್ರಮ ನಡೆದಿದೆ. ಬಾರ್ಪೇಟದ ಸಾಮಾಜಿಕ ಕಾರ್ಯಕರ್ತ ಫಾರೂಕ್ ಖಾನ್ ಪ್ರಕಾರ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ವಾಸವಿದ್ದ 28 ಕುಟುಂಬಗಳಿಂದ ಒಬ್ಬೊಬ್ಬರನ್ನು ಸೋಮವಾರ ಪೊಲೀಸ್ ಠಾಣೆಗಳಿಗೆ ಕರೆದು ಕೆಲವು ಸಹಿ ಹಾಕಿಸಲಾಯಿತು. ಆಮೇಲೆ ಅವರನ್ನು ಎಸ್ಪಿ ಆಫೀಸಿಗೆ ಕರೆಯಲಾಯಿತು ಹಾಗು ಬಲವಂತವಾಗಿ ವಾಹನಗಳಿಗೆ ತುಂಬಲಾಯಿತು. ಅವರಿಗೆ ಈ ಹಿಂದೆ ವಿದೇಶಿಯರು ಎಂದು ಪೊಲೀಸರಿಂದ ನೋಟಿಸ್ ನೀಡಲಾಗಿತ್ತು ಮತ್ತು ಅವರ ಪ್ರಕರಣವನ್ನು ವಿದೇಶಿಯರ ನ್ಯಾಯಮಂಡಳಿಗೆ ಕಳಿಸಲಾಗಿತ್ತು. ಅಲ್ಲಿ ಹಲವು ಬಾರಿ ವಿಚಾರಣೆ ಬಳಿಕ ಅವರನ್ನು ವಿದೇಶಿಯರು ಎಂದು ಘೋಷಿಸಲಾಗಿದೆ. ಇಂತಹ ವಿದೇಶಿಯರ ನ್ಯಾಯಮಂಡಳಿ ಅಸ್ಸಾಂನಲ್ಲಿ ಸುಮಾರು ನೂರಿವೆ.
ಬಾರ್ಪೇಟಾದಲ್ಲಿನ ವಿದೇಶಿಯರ ನ್ಯಾಯಮಂಡಳಿಯು ಈ ಹಿಂದೆ ವಿದೇಶಿಯರೆಂದು ಘೋಷಿಸಲ್ಪಟ್ಟ 28 ವ್ಯಕ್ತಿಗಳನ್ನು ಬಂಧನದಲ್ಲಿರಿಸಲು ಆದೇಶಿಸಿದೆ. ಬಾರ್ಪೇಟಾ ಪೋಲೀಸರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯು ಈ ವ್ಯಕ್ತಿಗಳನ್ನು ಗೋಲ್ಪಾರಾ ಜಿಲ್ಲೆಯ ಮಟಿಯಾದಲ್ಲಿರುವ ಬಂಧನ ಶಿಬಿರಕ್ಕೆ ವರ್ಗಾಯಿಸಿತು. ಬಂಧಿತರು ಸ್ಥಳಾಂತರಗೊಳ್ಳುವ ಮೊದಲು ಬಾರ್ಪೇಟಾ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದರು. ಬಾರ್ಪೇಟಾ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವಾ ಶರ್ಮಾ ಅವರು ನ್ಯಾಯಮಂಡಳಿಯ ಆದೇಶಗಳನ್ನು ಜಾರಿಗೊಳಿಸಲಾಗಿದೆ ಎಂದು ದೃಢಪಡಿಸಿದ್ದಾರೆ.
ವ್ಯಾಪಕ ಶೋಧ ಕಾರ್ಯಾಚರಣೆಗಳು ಮತ್ತು ಕಾನೂನು ಪರಿಶೀಲನೆಯ ನಂತರ ಈ ವ್ಯಕ್ತಿಗಳನ್ನು ವಿದೇಶಿ ಪ್ರಜೆಗಳೆಂದು ಘೋಷಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಂಧಿತರೆಲ್ಲರೂ ಬಾರ್ಪೇಟಾ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಬಂದವರು.
ಮಹಿಳೆಯರನ್ನು ಬಸತನ್ ನೆಸ್ಸಾ, ಬರ್ದಲ್ನಿಯ ಐಮೋನಾ ಖಾತುನ್, ಅಜ್ವಾ ಖಾತುನ್, ಸಬಿಯಾ ಖಾತುನ್, ಮನೋವಾರಾ ಬೇಗಂ, ಜಬೇದಾ ಖಾತುನ್, ಸೂಫಿಯಾ ಖಾತುನ್, ರೈಜಾನ್ ಬೇಗಂ ಮತ್ತು ಇಟಾನ್ ನೆಸ್ಸಾ ಎಂದು ಗುರುತಿಸಲಾಗಿದೆ. ಬಂಧಿತ ಪುರುಷರಲ್ಲಿ ಅಬ್ದುಲ್ ಲತೀಫ್, ಕಿತಾಬ್ ಅಲಿ, ಸಿರಾಜುಲ್ ಹಕ್, ಇಬ್ರಾಹಿಂ ಅಲಿ, ಹನೀಫ್ ಅಲಿ, ಮಂಜೂರ್ ಆಲಂ, ಐನಾಲ್ ಮಂಡಲ್, ಶಹದತ್ ಅಲಿ, ಶಾ ಅಲಿ, ಸೋನಾವುದ್ದೀನ್, ರಮೀಜುದ್ದೀನ್, ಅಜ್ಮತ್ ಅಲಿ, ಬಾಸಿದ್ ಅಲಿ, ಸಲಾಮ್ ಅಲಿ, ಜಾಯ್ನಾಲ್ ಮಿರ್, ಶುಕುರ್ ಮಿಯಾ, ಮಲಂ ಮಿಯಾ ಮತ್ತು ಅನ್ವರ್ ಹುಸೇನ್ ಸೇರಿದ್ದಾರೆ.
ಪೊಲೀಸ್ ಅಧೀಕ್ಷಕರ ಕಚೇರಿಯಿಂದ ತಮ್ಮ ಪ್ರೀತಿಪಾತ್ರರನ್ನು ಬಸ್ಗಳಲ್ಲಿ ಗೋಲ್ಪಾರಾ ಬಂಧನ ಶಿಬಿರಕ್ಕೆ ಕರೆದೊಯ್ಯುತ್ತಿರುವುದನ್ನು ನೋಡಿ ಕುಟುಂಬ ಸದಸ್ಯರು ಕಣ್ಣೀರು ಸುರಿಸುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿತ್ತು. ಈ ಘಟನೆಯು ವಿದೇಶಿಯರ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ವಿದೇಶಿಯರೆಂದು ಪರಿಗಣಿಸಲ್ಪಟ್ಟ ವ್ಯಕ್ತಿಗಳನ್ನು ಗುರುತಿಸಲು ಮತ್ತು ಬಂಧಿಸಲು ಅಸ್ಸಾಂ ಸರ್ಕಾರದ ವ್ಯಾಪಕವಾಗಿ ನಡೆಯುತ್ತಿರುವ ಪ್ರಯತ್ನದ ಭಾಗವಾಗಿದೆ. ವಿದೇಶಿಯರೆಂದು ಘೋಷಿಸಲ್ಪಟ್ಟ ಎಲ್ಲಾ ಜನರು ಬಂಗಾಳಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು.
ಆಕ್ಷೇಪಾರ್ಹವಾದ ವಿಷಯವನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ಇಬ್ಬರು ಪುರುಷರನ್ನು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ ಅಸ್ಸಾಮಿ ಬಿಹು ಹಾಡನ್ನು ವಿರೂಪಗೊಳಿಸಿದ್ದಕ್ಕಾಗಿ 31 ವರ್ಷದ ಅಲ್ತಾಫ್ ಹುಸೇನ್ ಅವರನ್ನು ಆಗಸ್ಟ್ 31 ರಂದು ಧುಬ್ರಿ ಜಿಲ್ಲೆಯ ಗೌರಿಪುರದಲ್ಲಿ ಪೊಲೀಸರು ಬಂಧಿಸಿದ್ದರೆ, 20 ವರ್ಷದ ಸನಿದುಲ್ ಹಕ್ ಅವರನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳಲ್ಲಿ ಹಿಂದೂ ದೇವತೆಗಳ "ಆಕ್ಷೇಪಾರ್ಹ ಚಿತ್ರಗಳನ್ನು" ಪೋಸ್ಟ್ ಮಾಡಿದ್ದಕ್ಕಾಗಿ ಆಗಸ್ಟ್ 30 ರಂದು ಬಾರ್ಪೇಟಾ ಪೊಲೀಸರು ಬಂಧಿಸಿದ್ದರು.
ಹುಸೇನ್ ಖಾಸಗಿ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಹಕ್ ಬಾರ್ಪೇಟಾ ಪಟ್ಟಣದ ಕಾಲೇಜಿನಲ್ಲಿ ಮೂರನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿ.
ಇತ್ತೀಚೆಗೆ ಮಧ್ಯ ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಇಬ್ಬರು ಯುವಕರು ಅತ್ಯಾಚಾರವೆಸಗಿದ ನಂತರ ಬಂಗಾಳಿ ಮುಸ್ಲಿಮರ ವಿರುದ್ಧ ವ್ಯಾಪಕ ಅಪಪ್ರಚಾರ ಶುರುವಾಗಿತ್ತು. ಅದರ ನಡುವೆ ಈ 28 ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಬಂಗಾಳಿ ಮುಸ್ಲಿಮರನ್ನು ಅಲ್ಲಿ 'ಮಿಯಾಗಳು' ಎಂದು ಕರೆಯಲಾಗುತ್ತದೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಅನೇಕರು ಅವರನ್ನು "ನುಸುಳುಕೋರರು" ಮತ್ತು "ಅಸ್ಸಾಮಿಗಳ ಗುರುತಿಗೆ ಬೆದರಿಕೆ" ಎಂದು ಪರಿಗಣಿಸುತ್ತಾರೆ. ಬಿಜೆಪಿ ಹಿಂದೂ ವಲಸಿಗರನ್ನು ರಾಜ್ಯಕ್ಕೆ ಬೆದರಿಕೆ ಎಂದು ಪರಿಗಣಿಸುವುದಿಲ್ಲ.
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಇತ್ತೀಚೆಗೆ ಹಿಂದೂ ಬಂಗಾಳಿಗಳ ಡಿ-ವೋಟರ್ ಸಮಸ್ಯೆಯನ್ನು ಆರು ತಿಂಗಳಲ್ಲಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ. ಡಿ ವೋಟರ್ ಅಂದ್ರೆ ಡೌಟ್ ಫುಲ್ ವೋಟರ್ ಅಥವಾ ವಿದೇಶಿ ಎಂದರ್ಥ.
2029 ರಲ್ಲಿ ಎನ್ ಆರ್ ಸಿ ಪಟ್ಟಿ ತಯಾರಿಸಿ ಸುಮಾರು 19 ಲಕ್ಷ ಜನರನ್ನು ವಿದೇಶಿಯರು ಎಂದು ಘೋಷಿಸಿ ಪಟ್ಟಿಯಿಂದ ಕೈ ಬಿಟ್ಟಿದ್ದ ಅಸ್ಸಾಂ ಸರಕಾರ ಅದರಲ್ಲಿ ಭಾರತದ ನಿವೃತ್ತ ಸೇನಾಧಿಕಾರಿ ಮೊಹಮ್ಮದ್ ಸನಾವುಲ್ಲಾ ಎಂಬವರನ್ನೂ ವಿದೇಶಿ ಎಂದು ಗುರುತಿಸಿದ್ದೂ ದೊಡ್ಡ ವಿವಾದವಾಗಿತ್ತು.