ಅಸ್ಸಾಂ ಬುಲ್ಡೋಝರ್ ಕಾರ್ಯಾಚರಣೆ | ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ : ಅಸ್ಸಾಂನ ಸೋನಾಪುರ್ ನಲ್ಲಿ ನಡೆಸಲು ಉದ್ದೇಶಿಸಿರುವ ಬುಲ್ಡೋಝರ್ ಮೂಲಕ ತೆರವು ಮತ್ತು ನೆಲಸಮ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದೆ. ಈ ಸಂಬಂಧ ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು, ಇನ್ನು ಮೂರು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ.
ಪೂರ್ವಾನುಮತಿ ಇಲ್ಲದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಶಂಕಿತರ ಸ್ವತ್ತುಗಳನ್ನು ಬುಲ್ಡೋಝರ್ ಬಳಸಿ ನೆಲಸಮಗೊಳಿಸುವಂತಿಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ತೀರ್ಪನ್ನು ಈ ನೆಲಸಮ ಕಾರ್ಯಾಚರಣೆ ಉಲ್ಲಂಘಿಸುತ್ತದೆ ಎಂದು 48 ಮಂದಿ ಸ್ಥಳೀಯ ನಿವಾಸಿಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಕಾಮ್ರೂಪ್ ಮೆಟ್ರೊ ಜಿಲ್ಲೆಯೊಳಗಿನ ಗುವಾಹಟಿಯ ಹೊರವಲಯದಲ್ಲಿರುವ ಸೋನಾಪುರ್ ನಲ್ಲಿ ಇತ್ತೀಚೆಗೆ ಜಿಲ್ಲಾಡಳಿತವು ಇತ್ತೀಚಿಗೆ ಸರಣಿ ತೆರವು ಕಾರ್ಯಾಚರಣೆಯ ನೋಟಿಸ್ ಗಳನ್ನು ಜಾರಿ ಮಾಡಿದೆ. ಆದಿವಾಸಿ ಜಮೀನುಗಳನ್ನು ಕಾನೂನುಬಾಹಿರ ನಿವಾಸಿಗಳು ಅಥವಾ ಅತಿಕ್ರಮಣಕಾರರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಈ ಭೂಮಿಯನ್ನು ವರ್ಗೀಕರಿಸಲಾಗಿದೆ.
ವಕೀಲ ಅದೀಲ್ ಅಹ್ಮದ್ ಮೂಲಕ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ, ಯಾವುದೇ ಪೂರ್ವಭಾವಿ ನೋಟಿಸ್ ಅಥವಾ ವಿಚಾರಣೆ ಇಲ್ಲದೆ ಮನೆಗಳ ನೆಲಸಮಕ್ಕೆ ಗುರುತು ಮಾಡಲಾಗಿದೆ ಎಂದು ವಾದಿಸಲಾಗಿದೆ. ಅರ್ಜಿದಾರರು ಪವರ್ ಆಫ್ ಅಟಾರ್ನಿ ಮೂಲಕ ಈ ಭೂಮಿಯ ಮೇಲೆ ಹಕ್ಕು ಹೊಂದಿದ್ದು, ಅವರ ಕುಟುಂಬಗಳು 1920ರಿಂದ, ಈ ಪ್ರದೇಶ ಆದಿವಾಸಿ ಭೂಮಿ ಎಂದು ನಮೂದಾಗುವುದಕ್ಕಿಂತ ಮುಂಚಿನಿಂದಲೂ ಇಲ್ಲಿ ವಾಸಿಸುತ್ತಿವೆ. ಈ ಕುಟುಂಬಗಳಿಗೆ ನಾಗರಿಕ ಸೌಲಭ್ಯಗಳು, ಪಡಿತರ ಚೀಟಿಗಳು, ಆಧಾರ್ ಚೀಟಿಗಳು ಹಾಗೂ ಮತದಾರರ ಗುರುತಿನ ಪತ್ರಗಳನ್ನು ಅವರ ವಾಸ್ತವ್ಯದ ಆಧಾರದ ಮೇರೆಗೆ ಒದಗಿಸಲಾಗಿದೆ ಎಂದೂ ಅರ್ಜಿಯಲ್ಲಿ ವಾದಿಸಲಾಗಿದೆ.