ಗೌರವ್ ಗೊಗೊಯಿ ಪತ್ನಿಗೆ ಐಎಸ್ಐ ಸಂಪರ್ಕವಿದೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಆರೋಪ
ಒಂದು ವೇಳೆ ಆಕೆ ಐಎಸ್ಐ ಏಜೆಂಟ್ ಆದರೆ, ನಾನು ʼರಾʼ ಏಜೆಂಟ್ ಎಂದು ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ

ಹಿಮಂತ ಬಿಸ್ವಾ ಶರ್ಮ, ಗೌರವ್ ಗೊಗೊಯಿ (Photo credit: PTI)
ಗುವಾಹಟಿ/ಹೊಸದಿಲ್ಲಿ: ಗುರುವಾರ ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ, ಗೌರವ್ ಗೊಗೊಯಿ ಬ್ರಿಟಿಷ್ ಪ್ರಜೆಯನ್ನು ವಿವಾಹವಾದ ನಂತರ, ಸಂಸತ್ತಿನಲ್ಲಿ ಸೂಕ್ಷ್ಮ ರಕ್ಷಣಾ ವಿಚಾರದ ಕುರಿತು ಪ್ರಶ್ನೆ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಇದು ಸುಳ್ಳು ಆರೋಪ ಎಂದು ಗೌರವ ಗೊಗೊಯಿ ಅಲ್ಲಗಳೆದಿದ್ದಾರೆ.
ಗೌರವ್ ಗೊಗೊಯಿ ಅವರ ಪತ್ನಿಗೆ ಪಾಕಿಸ್ತಾನ ಮತ್ತು ಐಎಸ್ಐನೊಂದಿಗೆ ಸಂಪರ್ಕವಿದೆ ಎಂದು ಬಿಜೆಪಿ ಆರೋಪಿಸಿದ ಮರು ದಿನ ಹಿಮಂತ್ ಬಿಸ್ವ ಶರ್ಮರಿಂದ ಈ ಆರೋಪ ಕೇಳಿ ಬಂದಿದೆ. ಆದರೆ, ತಮ್ಮ ವಿರುದ್ಧದ ಆರೋಪವನ್ನು ಅಲ್ಲಗಳೆದಿರುವ ಲೋಕಸಭಾ ಉಪ ವಿಪಕ್ಷ ನಾಯಕರೂ ಆದ ಗೌರವ್ ಗೊಗೊಯಿ, ‘ಇದೊಂದು ಹಾಸ್ಯಾಸ್ಪದ ಆರೋಪವಾಗಿದೆ” ಎಂದು ತಿರುಗೇಟು ನೀಡಿದ್ದಾರೆ.
“2015ರಲ್ಲಿ ದಿಲ್ಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳ ಕುರಿತು ಚರ್ಚಿಸಲು ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಾಸಿತ್ ಅವರು ಮೊದಲ ಬಾರಿಯ ಲೋಕಸಭಾ ಸದಸ್ಯ ಹಾಗೂ ಅವರ ನವೋದ್ಯಮವಾದ ʼಪಾಲಿಸಿ ಫಾರ್ ಯೂತ್ʼ ಅನ್ನು ಆಹ್ವಾನಿಸಿದ್ದರು” ಎಂದು ಗೌರವ್ ಗೊಗೊಯಿ ಅವರ ಹೆಸರನ್ನು ಉಲ್ಲೇಖಿಸದೆ ಹಿಮಂತ ಬಿಸ್ವಾ ಶರ್ಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಗಮನಾರ್ಹ ಸಂಗತಿಯೆಂದರೆ, ಆ ವೇಳೆ ಸಂಸದರು ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಸದಸ್ಯರಲ್ಲದಿದ್ದರೂ, ಅವರು ಪಾಕಿಸ್ತಾನದ ಹೈಕಮಿಷನರ್ ಅವರೊಂದಿಗೆ ಸಂಪರ್ಕ ಹೊಂದಿದ್ದ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಮೂಡಿಸುತ್ತದೆ” ಎಂದೂ ಆರೋಪಿಸಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿರುವ ಗೌರವ್ ಗೊಗೊಯಿ, “ಬಿಜೆಪಿ ಬಳಿ ಪ್ರಸ್ತಾಪಿಸಲು ಯಾವುದೇ ವಿಷಯಗಳಿಲ್ಲದೆ ಇರುವುದರಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಭಾರತೀಯರು ರಾಜಕೀಯವಾಗಿ ತುಂಬಾ ಕ್ರಿಯಾಶೀಲವಾಗಿದ್ದು, ಬಿಜೆಪಿ ಹರಡುತ್ತಿರುವ ಸುಳ್ಳುಗಳು ಹಾಗೂ ಗೊಂದಲಗಳ ಬಗ್ಗೆ ಜಾಗೃತರಾಗಿದ್ದಾರೆ” ಎಂದು PTI ತಿಳಿಸಿದ್ದಾರೆ.
“ಅವರು ಸುಳ್ಳುಗಳನ್ನು ಹರಡುವುದನ್ನು ಮುಂದುವರಿಸಲಿ ಹಾಗೂ ನಾವು ನಮ್ಮ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಮುಂದಿನ ವರ್ಷ ಅಸ್ಸಾಂ ವಿಧಾನಸಭಾ ಚುನಾವಣೆ ಬಾಕಿ ಇದ್ದು, ನಾವು ರಾಜ್ಯದ ಸಮಸ್ಯೆಗಳಾದ ನಿರುದ್ಯೋಗ ಮತ್ತು ಹಣದುಬ್ಬರದ ಕುರಿತು ಧ್ವನಿ ಎತ್ತುತ್ತೇವೆ. ಪ್ರಜಾಪ್ರಭುತ್ವದಲ್ಲಿ ಜನರೇ ದೇವರಾಗಿದ್ದು, ನನಗೆ ಅವರಲ್ಲಿ ಸಂಪೂರ್ಣ ವಿಶ್ವಾಸವಿದೆ” ಎಂದೂ ಹೇಳಿದ್ದಾರೆ.
ಇದಕ್ಕೂ ಮುನ್ನ, ಗೌರವ್ ಗೊಗೊಯಿ ಅವರ ಪತ್ನಿಗೆ ಪಾಕಿಸ್ತಾನ ಹಾಗೂ ಐಎಸ್ಐನೊಂದಿಗೆ ಸಂಪರ್ಕವಿದೆ ಎಂದು ಬುಧವಾರ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದರು. ಆದರೆ, ಈ ಆರೋಪಗಳನ್ನು ತಳ್ಳಿ ಹಾಕಿರುವ ಗೌರವ್ ಗೊಗೊಯಿ, “ಒಂದು ವೇಳೆ ನನ್ನ ಪತ್ನಿ ಐಎಸ್ಐ ಏಜೆಂಟ್ ಆದರೆ, ನಾನು ರಾ ಏಜೆಂಟ್” ಎಂದ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.