ಮುಸ್ಲಿಮ್ ಒಡೆತನದ ವಿವಿ ವಿದ್ಯಾರ್ಥಿಗಳು ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದನ್ನು ತಡೆಯಲು ಅಸ್ಸಾಂ ಸಿಎಂ ಶಿಫಾರಸು
ಹಿಮಂತ ಬಿಸ್ವ ಶರ್ಮಾ (Photo: PTI)
ಗುವಾಹಟಿ: ನೆರೆಯ ಮೇಘಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ(ಯುಎಸ್ಟಿಎಂ)ಯಿಂದ ಪದವಿ ಪಡೆದ ವಿದ್ಯಾರ್ಥಿಗಳು ರಾಜ್ಯ ಸರಕಾರದ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸುವ ಸಾಧ್ಯತೆಯನ್ನು ತಾನು ಪರಿಶೀಲಿಸುತ್ತಿರುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಮೇಘಾಲಯದ ರಿ ಭೋಯಿ ಜಿಲ್ಲೆಯಲ್ಲಿರುವ ಈ ಖಾಸಗಿ ವಿವಿಯು ಅಸ್ಸಾಮಿನ ಕರೀಮ್ಗಂಜ್ ಜಿಲ್ಲೆಯ ನಿವಾಸಿ ಬಂಗಾಳಿ ಮೂಲದ ಮಹಬೂಬುಲ್ ಹಕ್ ಒಡೆತನದ ಶೈಕ್ಷಣಿಕ ಪ್ರತಿಷ್ಠಾನಕ್ಕೆ ಸೇರಿದೆ.
ಆ.5ರಂದು ಗುವಾಹಟಿಯಲ್ಲಿ ಉಂಟಾಗಿದ್ದ ದಿಢೀರ್ ಪ್ರವಾಹಕ್ಕೆ ಯುಎಸ್ಟಿಎಂ ಕಾರಣ ಎಂದು ಶರ್ಮಾ ಈ ಹಿಂದೆ ಪ್ರತಿಪಾದಿಸಿದ್ದರು.
ನೆರೆಯ ರಿ ಭೋಯಿ ಜಿಲ್ಲೆಯಲ್ಲಿ ಮರಗಳನ್ನು ಕಡಿದು,ಗುಡ್ಡಗಳನ್ನು ನಾಶಗೊಳಿಸಿ ವಿವಿಯ ಕ್ಯಾಂಪಸ್ ನಿರ್ಮಾಣಗೊಂಡಿದ್ದು,ಇದು ನಗರದಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ವಿವಿಯು ‘ಪ್ರವಾಹ ಜಿಹಾದ್’ ನಡೆಸುತ್ತಿದೆ ಎಂದೂ ಅವರು ಆರೋಪಿಸಿದ್ದರು.
ರಿ ಭೋಯಿ ಜಿಲ್ಲೆಯಲ್ಲಿನ ಗುಡ್ಡಗಳ ತಪ್ಪಲಿನಲ್ಲಿ ಗುವಾಹಟಿ ನಗರವಿದ್ದು,ಯುಎಸ್ಟಿಎಂ ನಗರದ ಹೊರವಲಯದಿಂದ ಆರು ಕಿ.ಮೀ.ಅಂತರದಲ್ಲಿದೆ.
ಯುಎಸ್ಟಿಎಮ್ನಿಂದ ಪದವಿ ಪಡೆದಿರುವ ವಿದ್ಯಾರ್ಥಿಗಳು ಬೇರೆ ರಾಜ್ಯದಿಂದ ಪ್ರಮಾಣಪತ್ರವನ್ನು ಸ್ವೀಕರಿಸಿದ್ದಾರೆ ಎಂದು ಬುಧವಾರ ಇಲ್ಲಿ ಹೇಳಿದ ಶರ್ಮಾ, ‘ಈ ವಿದ್ಯಾರ್ಥಿಗಳು ಅಸ್ಸಾಮಿನಲ್ಲಿ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ,ಇದರಿಂದ ಗುವಾಹಟಿ ಮತ್ತು ದಿಬ್ರುಗಡ ವಿವಿಗಳ ನಮ್ಮ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿಯೇ ಯುಎಸ್ಟಿಎಂ ವಿದ್ಯಾರ್ಥಿಗಳು ಅಸ್ಸಾಮಿನಲ್ಲಿ ಉದ್ಯೋಗವನ್ನು ಬಯಸಿದರೆ ಅವರು ಇನ್ನೊಂದು ಪರೀಕ್ಷೆಯನ್ನು ಬರೆಯುವುದನ್ನು ಕಡ್ಡಾಯಗೊಳಿಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸುವಂತೆ ನಾನು ಕಾನೂನು ಇಲಾಖೆಗೆ ಸೂಚಿಸಿದ್ದೇನೆ’ ಎಂದರು.
‘ಯುಎಸ್ಟಿಎಂ ಮಾತ್ರವಲ್ಲ, ಪಶ್ಚಿಮ ಬಂಗಾಳ,ಕರ್ನಾಟಕ,ಮಹಾರಾಷ್ಟ್ರ ಹೀಗೆ ಹೊರಗಿನ ವಿವಿಗಳಿಂದ ಪದವಿಗಳನ್ನು ಪಡೆದಿರುವವರೂ ಅರ್ಜಿಗಳನ್ನು ಸಲ್ಲಿಸುತ್ತಾರೆ. ಆದರೆ ಯುಎಸ್ಟಿಎಂ ಬಗ್ಗೆ ನನಗೆ ಕೊಂಚ ಹೆಚ್ಚು ಕೋಪವಿದೆ, ಏಕೆಂದರೆ ಅವರು ನಮ್ಮಲ್ಲಿ ನೆರೆಗೆ ಕಾರಣರಾಗುತ್ತಿದ್ದಾರೆ’ ಎಂದು ಹೇಳಿದ ಶರ್ಮಾ, ಮೇಘಾಲಯದಿಂದ ಹರಿಯುವ ಮಳೆನೀರು ಗುವಾಹಟಿಯಲ್ಲಿ ಪ್ರವಾಹ ಹೆಚ್ಚಿಸುತ್ತಿರುವ ಬಗ್ಗೆ ರಾಜ್ಯದ ಕಳವಳಗಳನ್ನು ಅಲ್ಲಿಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರಿಗೂ ತಿಳಿಸಿದ್ದೇನೆ ಎಂದರು.
ದೀಪೋರ್ ಬೀಲ್ ಸರೋವರಕ್ಕೆ ನೀರು ತಿರುಗಿಸುವ ಕೆಲಸವನ್ನು ನೆದರ್ಲ್ಯಾಂಡ್ಸ್ನ ತಜ್ಞರ ಸಮಿತಿಯೊಂದಕ್ಕೆ ವಹಿಸಲಾಗಿದೆ. ರೂರ್ಕಿ ಮತ್ತು ಗುವಾಹಟಿ ಐಐಟಿಗಳ ತಜ್ಞರೂ ಈ ವಿಷಯವನ್ನು ಪರಿಶೀಲಿಸಲಿದ್ದಾರೆ ಎಂದ ಶರ್ಮಾ,ಜೋರಾಬಾಟ್ನಿಂದ ಬರುತ್ತಿರುವ ನೀರಿನ ಸಮಸ್ಯೆಯನ್ನು ಚರ್ಚಿಸಲು ಉಭಯ ಸರಕಾರಗಳ ಜಂಟಿ ಸಮಿತಿಯ ಸ್ಥಾಪನೆಯನ್ನೂ ಸಂಗ್ಮಾ ಪ್ರಸ್ತಾವಿಸಿದ್ದಾರೆ ಎಂದು ಹೇಳಿದರು.