ಮಿಯಾ ಮುಸ್ಲಿಮರು ಅಸ್ಸಾಮನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ: ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ | PC : PTI
ಗುವಾಹಟಿ: ಮಿಯಾ ಮುಸ್ಲಿಮರು ರಾಜ್ಯವನ್ನು ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮಂಗಳವಾರ ವಿಧಾನಸಭೆಯಲ್ಲಿ ಘೋಷಿಸಿದರು. ಮಿಯಾ ಪದವು ಬಂಗಾಳಿ ಮೂಲದ ಮುಸ್ಲಿಮರನ್ನು ಉಲ್ಲೇಖಿಸುತ್ತದೆ, ಅವರನ್ನು ಅಕ್ರಮ ವಲಸಿಗರು ಎಂದು ಬಿಜೆಪಿ ಆಗಾಗ ಹೇಳುತ್ತದೆ.
'ಮಿಯಾ' ಪದವು ಬಂಗಾಳಿ ಮೂಲದ ಮುಸ್ಲಿಮರನ್ನು ಉಲ್ಲೇಖಿಸುತ್ತದೆ, ಅವರನ್ನು ಅಕ್ರಮ ವಲಸಿಗರು ಎಂದು ಹೇಳಲಾಗುತ್ತದೆ.
2002ರ ಗುಜರಾತ್ ಸ್ಥಿತಿಯನ್ನು ಅಸ್ಸಾಮಿನಲ್ಲಿ ಸೃಷ್ಟಿಸಲು ಬಿಜೆಪಿಯು ಪ್ರಯತ್ನಿಸುತ್ತಿದೆ ಎಂದು ಪಕ್ಷೇತರ ಶಾಸಕ ಅಖಿಲ ಗೊಗೊಯಿ ಆರೋಪಿಸಿದ ಎರಡು ದಿನಗಳ ಬಳಿಕ ಶರ್ಮಾರ ಈ ಹೇಳಿಕೆ ಹೊರಬಿದ್ದಿದೆ. ಅಪ್ಪರ್ ಅಸ್ಸಾಮನ್ನು ತೊರೆಯುವಂತೆ ಕೆಲವು ಸಂಘಟನೆಗಳು ಮಿಯಾ ಮುಸ್ಲಿಮರಿಗೆ ಬೆದರಿಕೆಗಳನ್ನು ಒಡ್ಡುತ್ತಿವೆ ಎಂಬ ವರದಿಗಳ ನಡುವೆಯೇ ಗೊಗೊಯಿ ರವಿವಾರ ಈ ಆರೋಪವನ್ನು ಮಾಡಿದ್ದರು.
‘ಚುನಾವಣೆಗಳನ್ನು ಗೆಲ್ಲಲು ಅವರು (ಬಿಜೆಪಿ) ಅಸ್ಸಾಮಿನಲ್ಲಿ ಅಸ್ಥಿರತೆ ಮತ್ತು ಸಂಘರ್ಷ ಸ್ಥಿತಿಯನ್ನುಸೃಷ್ಟಿಸಲು ಬಯಸಿದ್ದಾರೆ. ಅಸ್ಸಾಮಿನಲ್ಲಿ ಬಿಜೆಪಿಯ ಅಜೆಂಡಾವನ್ನು ಅನುಸರಿಸುತ್ತಿರುವವರ ಬಗ್ಗೆ ನಮಗೆ ಚೆನ್ನಾಗಿ ತಿಳಿದಿದೆ ’ ಎಂದು ಗೊಗೊಯಿ ಹೇಳಿದ್ದರು.
ಆ.22ರಂದು ಅಸ್ಸಾಮಿನ ನಾಗಾಂವ್ ಜಿಲ್ಲೆಯ ಧಿಂಗ್ ಪ್ರದೇಶದಲ್ಲಿ 14ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪದ ಬಳಿಕ ಒಂದು ವರ್ಗದ ಸಮುದಾಯವು ಬೆದರಿಕೆಗಳನ್ನು ಎದುರಿಸುತ್ತಿದೆ. ತಫಝುಲ್ ಇಸ್ಲಾಮ್(24) ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಲ್ಲಿ ಓರ್ವನಾಗಿದ್ದ.
ಅಪ್ಪರ್ ಅಸ್ಸಾಮನ್ನು ತೊರೆಯುವಂತೆ ಮುಸ್ಲಿಂ ಸಮುದಾಯದ ವರ್ಗಕ್ಕೆ ಬೆದರಿಕೆಯೊಡ್ಡುತ್ತಿರುವ ಅಜ್ಞಾತ ಸಂಘಟನೆಗಳು ಮತ್ತು ಮೂಲಭೂತವಾದಿ ಗುಂಪುಗಳ ವಿರುದ್ಧ ಕ್ರಮವನ್ನು ಕೋರಿ ಪ್ರತಿಪಕ್ಷ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ರಾಜ್ಯಪಾಲ ಲಕ್ಷ್ಮಣ ಪ್ರಸಾದ ಆಚಾರ್ಯ ಅವರಿಗೆ ಪತ್ರ ಬರೆದಿದೆ.
ಶರ್ಮಾ ಮಿಯಾ ಮುಸ್ಲಿಮರ ವಿರುದ್ಧ ಹೇಳಿಕೆಯನ್ನು ನೀಡಿರುವುದು ಇದೇ ಮೊದಲಲ್ಲ,ಹಿಂದಿನಿಂದಲೂ ಅವರು ಈ ಕೆಲಸವನ್ನು ಮಾಡುತ್ತಿದ್ದಾರೆ.
ಬಿಜೆಪಿಗೆ ಮುಂದಿನ ಹತ್ತು ವರ್ಷಗಳ ಕಾಲ ‘ಚಾರ್( ನದಿಯಲ್ಲಿಯ ಮರಳುದಿಬ್ಬ)’ನ ಮಿಯಾ ಮುಸ್ಲಿಮರ ಮತಗಳ ಅಗತ್ಯವಿಲ್ಲ ಎಂದು ಶರ್ಮಾ ಕಳೆದ ವರ್ಷದ ಅಕ್ಟೋಬರ್ನಲ್ಲಿ ಹೇಳಿದ್ದರು.