ಅಸ್ಸಾಂ ನ್ಯಾಯಾಧೀಕರಣ ವಿದೇಶಿ ಎಂದು ಘೋಷಿಸಿದ ಮಹಿಳೆ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು: ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್ | PC : PTI
ಹೊಸದಿಲ್ಲಿ : ಅಸ್ಸಾಂನ ವಿದೇಶಿಯರ ನ್ಯಾಯಾಧಿಕರಣ ವಿದೇಶಿ ಎಂದು ಘೋಷಿಸಿದ ಮಹಿಳೆಯ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ನ್ಯಾಯಾಧಿಕರಣದ ನಿರ್ಧಾರವನ್ನು ಎತ್ತಿ ಹಿಡಿದು ಗುವಾಹಟಿ ಉಚ್ಛ ನ್ಯಾಯಾಲಯ ನೀಡಿದ ತೀರ್ಪಿಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿಪಾಲ್ ಹಾಗೂ ಮನೋಜ್ ಮಿಶ್ರಾ ಅವರನ್ನು ಒಳಗೊಡ ಪೀಠ ತಡೆ ನೀಡಿದೆ.
ಈ ವಿಷಯದ ಕುರಿತಂತೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರ, ಅಸ್ಸಾಂ ಸರಕಾರ, ಚುನಾವಣಾ ಆಯೋಗ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯ ಅಸ್ಸಾಂ ಸಂಯೋಜಕರಿಗೆ ಪೀಠ ಸೂಚಿಸಿದೆ.
ರಾಜ್ಬೊನ್ಶಿ ಸಮುದಾಯಕ್ಕೆ ಸೇರಿದ ಮಾಯಾ ಬರ್ಮನ್ ಅವರು ತನ್ನ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಹೆತ್ತವರ ಮತದಾರರ ಚೀಟಿ ಸೇರಿದಂತೆ ಅಗತ್ಯವಿರುವ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ವಿದೇಶಿ ಎಂದು ವಿದೇಶಿಯರ ನ್ಯಾಯಾಧಿಕರಣ ತೀರ್ಪು ನೀಡಿತ್ತು. ಈ ತೀರ್ಪನ್ನು ಗುವಾಹಟಿ ಉಚ್ಛ ನ್ಯಾಯಾಲಯ ಜನವರಿ 11ರಂದು ಎತ್ತಿ ಹಿಡಿದಿತ್ತು.
ಬರ್ಮನ್ ಅವರ ಹೆತ್ತವರು ಸಾವನ್ನಪ್ಪಿದ್ದಾರೆ. ಅವರು ವಿವಾಹದ ಬಳಿಕ ಪಶ್ಚಿಮಬಂಗಾಳದ ಕೋಚ್ಬೆಹಾರ್ ಜಿಲ್ಲೆಯಿಂದ ಅಸ್ಸಾಂಗೆ ವಲಸೆ ಹೋದ ಬಳಿಕ ಅಗತ್ಯವಿರುವ ದಾಖಲೆಗಳನ್ನು ಇರಿಸಿಕೊಳ್ಳುವುದು ಪ್ರಾಯೋಗಿಕವಾಗಿ ಸಾಧ್ಯವಾಗದು ಎಂದು ಉಚ್ಛ ನ್ಯಾಯಾಲಯ ಅಭಿಪ್ರಾಯಿಸಿತ್ತು.
ಭಾರತೀಯ ನಾಗರಿಕರಾಗಿರುವ ಹೆತ್ತವರೊಂದಿಗಿನ ಸಂಬಂಧವನ್ನು ಸಾಬೀತುಪಡಿಸುವ ಇತರ ದಾಖಲೆಗಳು ನೆರೆಯಲ್ಲಿ ಕೊಚ್ಚಿಹೋಗಿವೆ ಎಂದು ದೂರುದಾರರು ಪ್ರತಿಪಾದಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರನ್ನು ಪಾಟಿ ಸವಾಲಿಗೆ ಒಳಪಡಿಸದೆ ಪೌರತ್ವಕ್ಕೆ ಬರ್ಮನ್ ಅವರ ಶಾಲಾ ದಾಖಲೆಯನ್ನು ಪರಿಗಣಿಸಲು ಉಚ್ಛ ನ್ಯಾಯಾಲಯ ನಿರಾಕರಿಸಿತ್ತು.
ಮುಖ್ಯೋಪಾಧ್ಯಾಯರನ್ನು ಪಶ್ಚಿಮಬಂಗಾಳದಿಂದ ಅಸ್ಸಾಂನ ಲಖಿಂಪುರಕ್ಕೆ ಕರೆದುಕೊಂಡು ಬರುವುದು ಅವರಿಗೆ ಸಾಧ್ಯವಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಸಿದೆ.
ರಾಜ್ಯದಲ್ಲಿ ವಾಸಿಸುತ್ತಿರುವ ದಾಖಲೆ ರಹಿತ ವಲಸಿಗರನ್ನು ಭಾರತೀಯ ನಾಗರಿಕರಿಂದ ಪ್ರತ್ಯೇಕಿಸುವ ಉದ್ದೇಶದಿಂದ ಅಸ್ಸಾಂ ತನ್ನ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು 2019 ಆಗಸ್ಟ್ 31ರಂದು ಪ್ರಕಟಿಸಿತ್ತು. ನೋಂದಣಿಯಲ್ಲಿ ಸೇರ್ಪಡೆಯಾಗಲು ತಾವು ಅಥವಾ ತಮ್ಮ ಪೂರ್ವಜರು 1971 ಮಾರ್ಚ್ 24 ಮಧ್ಯರಾತ್ರಿಯ ಮುನ್ನ ಅಸ್ಸಾಂಗೆ ಪ್ರವೇಶಿಸಿದ್ದೇವೆ ಎಂದು ನಿವಾಸಿಗಳು ಸಾಬೀತುಪಡಿಸಬೇಕು ಎಂದು ಅದು ಹೇಳಿತ್ತು.