ಅಸ್ಸಾಂ ಗಣಿ ದುರಂತ: ನಾಲ್ಕನೆ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ
Photo credit: PTI
ಉಮ್ರಾಂಗ್ಸೊ: ಅಸ್ಸಾಂ ರಾಜ್ಯದ ದಿಮ ಹಸಾವೊ ಜಿಲ್ಲೆಯಲ್ಲಿನ ಅಕ್ರಮ ಕಲ್ಲಿದ್ದಲು ಗಣಿಯೊಂದರಲ್ಲಿ ಸಿಲುಕಿಕೊಂಡಿರುವ ಗಣಿ ಕಾರ್ಮಿಕರನ್ನು ಪತ್ತೆ ಹಚ್ಚಲು ರಾಜ್ಯ ಮತ್ತು ಕೇಂದ್ರದ ವಿವಿಧ ರಕ್ಷಣಾ ಪಡೆಗಳ ರಕ್ಷಣಾ ಕಾರ್ಯಾಚರಣೆ ಗುರುವಾರವೂ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಡೀ ರಾತ್ರಿ ಗಣಿಯಿಂದ ನೀರನ್ನು ಹೊರ ಹಾಕಿದ ನಂತರ, ಗುರುವಾರ ಬೆಳಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಪುನಾರಂಭಗೊಂಡಿದೆ ಹಾಗೂ ರಿಮೋಟ್ಲಿ ಆಪರೇಟೆಡ್ ವೆಹಿಕಲ್ (ROV) ದೂರ ನಿಯಂತ್ರಿತ ವಾಹನವು ಪ್ರವಾಹದ ನೀರಿನಿಂದ ತುಂಬಿಕೊಂಡಿರುವ ಗಣಿಯೊಳಕ್ಕೆ ಹೋಗಿದೆ ಎಂದು ಅಸ್ಸಾಂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಇಲ್ಲಿಯವರೆಗೆ ROV ನಿಂದ ಏನನ್ನೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ತೀರಾ ನಾಜೂಕು ಹಾಗೂ ಕ್ಲಿಷ್ಟಕರ ಪರಿಸ್ಥಿತಿ ಇದ್ದರೂ, ಗಣಿ ಕಾರ್ಮಿಕರನ್ನು ಪತ್ತೆ ಹಚ್ಚಲು ದೂರ ನಿಯಂತ್ರಿತ ವಾಹನವು ತುಂಬಾ ಕಠಿಣ ಪ್ರಯತ್ನ ನಡೆಸುತ್ತಿದೆ. ಗಣಿಯೊಳಗಿನ ನೀರು ಸಂಪೂರ್ಣ ಕಪ್ಪಾಗಿದ್ದು, ಇದರಿಂದ ಏನನ್ನಾದರೂ ಪತ್ತೆ ಹಚ್ಚಲು ಸಮಸ್ಯೆಯನ್ನುಂಟಾಗುತ್ತಿದೆ” ಎಂದೂ ಅವರು ಹೇಳಿದ್ದಾರೆ.
ಇದರೊಂದಿಗೆ, ಗಣಿಯೊಳಗೆ ಸಿಲುಕಿಕೊಂಡಿರುವ ಗಣಿ ಕಾರ್ಮಿಕರನ್ನು ಪತ್ತೆ ಹಚ್ಚಲು ನೌಕಾಪಡೆಯ ನಾಲ್ವರು ಮುಳುಗು ತಜ್ಞರು ಗಣಿಯೊಳಗೆ ಹೋಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನೌಕಾಪಡೆ, ಸೇನೆ, ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ, ರಾಜ್ಯ ವಿಪತ್ತು ಸ್ಪಂದನಾ ಪಡೆ, ಒಎನ್ಜಿಸಿ, ಕೋಲ್ ಇಂಡಿಯಾ ಹಾಗೂ ಜಿಲ್ಲಾಡಳಿತವು ಗಣಿಯೊಳಗೆ ಸಿಲುಕಿಕೊಂಡಿರುವ ಗಣಿ ಕಾರ್ಮಿಕರನ್ನು ರಕ್ಷಿಸುವ ಜಂಟಿ ಪ್ರಯತ್ನದಲ್ಲಿ ತೊಡಗಿಕೊಂಡಿವೆ.