ಅಸ್ಸಾಂ: 3 ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ಮಕ್ಕಳು ನಾಪತ್ತೆ
ಸಾಂದರ್ಭಿಕ ಚಿತ್ರ | Photo: NDTV
ಗುವಾಹಟಿ : ಅಸ್ಸಾಂನಲ್ಲಿ ಕಳೆದ 3 ವರ್ಷಗಳಲ್ಲಿ 3,700ಕ್ಕೂ ಅಧಿಕ ಮಕ್ಕಳು ನಾಪತ್ತೆಯಾಗಿದ್ದಾರೆ. ಇವರಲ್ಲಿ 3,400 ಮಕ್ಕಳನ್ನು ವಿವಿಧ ಸಂಸ್ಥೆಗಳು ರಕ್ಷಿಸಿವೆ ಎಂದು ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಖಾತೆ ಸಚಿವೆ ಅಜಂತಾ ನಿಯೋಗ್ ಅವರು ರಾಜ್ಯ ವಿಧಾನ ಸಭೆಗೆ ಮಂಗಳವಾರ ಮಾಹಿತಿ ನೀಡಿದ್ದಾರೆ.
ರಕ್ಷಿಸಲಾದ ಮಕ್ಕಳಲ್ಲಿ ಕೆಲವರನ್ನು ಅವರ ಹೆತ್ತವರಿಗೆ ಒಪ್ಪಿಸಲಾಗಿದೆ. ಉಳಿದ ಮಕ್ಕಳನ್ನು ಸರಕಾರವೇ ನೋಡಿಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಭಾಸ್ಕರ್ ಜ್ಯೋತಿ ಬರುವಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಯೋಗ್, 2021ರಿಂದ 2023ರ ವರೆಗೆ ಒಟ್ಟು 3,779 ಮಕ್ಕಳು ತಮ್ಮ ಮನೆಯಿಂದ ನಾಪತ್ತೆಯಾಗಿರುವುದು ವರದಿಯಾಗಿದೆ. ಇವರಲ್ಲಿ 3,419 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ತಮ್ಮ ಮನೆಗಳ ವಿಳಾಸ ನೀಡಿದ ಮಕ್ಕಳನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ವಿವರ ನೀಡಲು ಸಾಧ್ಯವಾಗದ ಮಕ್ಕಳನ್ನು ಶಿಶು ಪಾಲನಾ ಕೇಂದ್ರಗಳಲ್ಲಿ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2012ರಿಂದ 2023ರ ವರೆಗೆ ಪೋಕ್ಸೊ ಕಾಯ್ದೆ ಅಡಿಯಲ್ಲಿ 6,054 ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ 3,522 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾಮರೂಪ್, ಉದಲ್ಗುರಿ, ಸೊಂತಿಪುರ, ಕೊಕ್ರಝಾರ್, ಲಖೀಂಪುರ ಹಾಗೂ ಬಿಸ್ವನಾಥ್ ಜಿಲ್ಲೆಗಳಲ್ಲಿ ಮಕ್ಕಳ ಮೇಲಿನ ಹೆಚ್ಚಿನ ಅಪರಾಧಗಳು ವರದಿಯಾಗಿವೆ. ಈ ಜಿಲ್ಲೆಗಳು ಸೇರಿದಂತೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಮಕ್ಕಳ ಸಾಗಾಟದ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.