ಅಸ್ಸಾಂ: ಒಂದೇ ಒಂದು ಕುಟುಂಬ ವಾಸಿಸುತ್ತಿರುವ ಗ್ರಾಮಕ್ಕೆ ಹೊರ ಜಗತ್ತಿನ ಸಂಪರ್ಕವೂ ಕಡಿತ!
ಸಾಂದರ್ಭಿಕ ಚಿತ್ರ (Credit: theshillongtimes.com)
ನಲ್ಬರಿ (ಅಸ್ಸಾಂ): ಹಲವಾರು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಉದ್ಘಾಟಿಸಿದ್ದ ನಲ್ಬರಿ ಜಿಲ್ಲೆಯ ಗ್ರಾಮವೊಂದರ ಮುಖ್ಯ ರಸ್ತೆಯು ಶಿಥಿಲಗೊಂಡಿರುವುದರಿಂದ ಅಲ್ಲಿ ವಾಸಿಸುತ್ತಿರುವ ಏಕೈಕ ಕುಟುಂಬವು ಹೊರಜಗತ್ತಿನೊಂದಿಗೆ ಅಕ್ಷರಶಃ ಸಂಪರ್ಕ ಕಡಿದುಕೊಂಡಿದೆ ಎಂದು PTI ವರದಿ ಮಾಡಿದೆ.
2011ರ ಜನಗಣತಿಯ ಸಂದರ್ಭದಲ್ಲಿ 16 ಮಂದಿ ನಿವಾಸಿಗಳಿದ್ದ ನಂ. 2 ಬರ್ಧನಾರಾ ಗ್ರಾಮ, ಯೋಗ್ಯ ರಸ್ತೆ ಸಂಪರ್ಕವಿಲ್ಲದೆ ಇದೀಗ ಕೇವಲ 5 ಮಂದಿ ಸದಸ್ಯರ ಏಕೈಕ ಕುಟುಂಬವನ್ನು ಮಾತ್ರ ಹೊಂದಿದೆ.
ನಲ್ಬರಿ ಕೇಂದ್ರ ಸ್ಥಾನದಿಂದ 12 ಕಿಮೀ ದೂರದಲ್ಲಿರುವ ಘೋಗ್ರಪಾರಾ ವೃತ್ತದಲ್ಲಿನ ಈ ಗ್ರಾಮದಲ್ಲಿ ಬಿಮಲ್ ದೇಕಾ, ಆತನ ಪತ್ನಿ ಅನಿಮಾ ಹಾಗೂ ಅವರ ಮಕ್ಕಳಾದ ನರೇನ್, ದೀಪಾಲಿ ಹಾಗೂ ಸ್ಯೂತಿ ಮಾತ್ರ ವಾಸವಾಗಿದ್ದಾರೆ.
ತಮ್ಮ ದೈನಂದಿನ ಜೀವನದ ಕುರಿತು ಮಾಹಿತಿ ಹಂಚಿಕೊಂಡಿರುವ ದೀಪಾಲಿ, “ನಾವು ವಾಹನಗಳನ್ನು ಚಲಾಯಿಸಲು ಯೋಗ್ಯವಾಗಿರುವ ರಸ್ತೆಗೆ ತಲುಪಲು ನಮ್ಮ ಗ್ರಾಮದಿಂದ 2 ಕಿಮೀ ದೂರ ನೀರು ಹಾಗೂ ಮಣ್ಣಿನ ರಸ್ತೆಯ ಮೂಲಕ ಸಂಚರಿಸಿ ಶಾಲೆ ಮತ್ತು ಕಾಲೇಜಿಗೆ ಹಾಜರಾಗಬೇಕಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ನಾವು ದೇಶೀಯ ದೋಣಿಯ ಮೂಲಕ ಪ್ರಯಾಣ ಬೆಳೆಸಬೇಕಾಗುತ್ತದೆ” ಎನ್ನುತ್ತಾರೆ.
ತಮ್ಮ ಮಕ್ಕಳನ್ನು ಕರೆದುಕೊಂಡು ಬರಲು ಹಾಗೂ ಕರೆದುಕೊಂಡು ಹೋಗಲು ಅನಿಮಾ ದೋಣಿಗೆ ಹುಟ್ಟು ಹಾಕುತ್ತಾರೆ. ಇಂತಹ ವಿಷಮ ಪರಿಸ್ಥಿತಿಯ ನಡುವೆಯೂ ಈ ಕುಟುಂಬವು ತನ್ನ ಎಲ್ಲ ಮೂವರು ಮಕ್ಕಳಿಗೂ ಶಿಕ್ಷಣವನ್ನು ನೀಡಲು ಹಿಂದೇಟು ಹಾಕಿಲ್ಲ.
ಈ ಮೂವರ ಪೈಕಿ ದೀಪಾಲಿ ಹಾಗೂ ನರೇನ್ ಪದವೀಧರರಾಗಿದ್ದರೆ, ಸ್ಯೂತಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದಾರೆ.
ಗ್ರಾಮಕ್ಕೆ ವಿದ್ಯುಚ್ಛಕ್ತಿ ಸಂಪರ್ಕ ಇಲ್ಲದಿರುವುದರಿಂದ ಈ ಮೂವರು ಮಕ್ಕಳು ಸೀಮೆಎಣ್ಣೆ ದೀಪದ ಕೆಳಗೆ ವ್ಯಾಸಂಗ ಮಾಡುತ್ತಿದ್ದಾರೆ. ಮಳೆಯಾದಾಗ ಈ ಗ್ರಾಮದ ರಸ್ತೆಗಳೆಲ್ಲ ನೀರಿನಲ್ಲಿ ಮುಳುಗಿ ಹೋಗುವುದರಿಂದ, ಈ ಕುಟುಂಬಕ್ಕೆ ಆ ಸಂದರ್ಭದಲ್ಲಿ ದೋಣಿಯೊಂದೇ ಸಾರಿಗೆ ಸಾಧನವಾಗಿದೆ.
ಕೆಲ ದಶಕಗಳ ಹಿಂದಿನವರೆಗೆ 162 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಗ್ರಾಮದ ಪರಿಸ್ಥಿತಿಯು ಇಷ್ಟು ಕರುಣಾಜನಕವಾಗಿರಲಿಲ್ಲ ಎನ್ನುತ್ತಾರೆ ಆಸುಪಾಸಿನ ಗ್ರಾಮಸ್ಥರು.
ಭಾರಿ ಕೃಷಿ ಉತ್ಪನ್ನ ಇಳುವರಿಗೆ ಹೆಸರುವಾಸಿಯಾಗಿರುವ ನಂ. 2 ಬರ್ಧನಾರಾ ಗ್ರಾಮಕ್ಕೆ ಕೆಲವು ದಶಕಗಳ ಹಿಂದೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಬಿಷ್ಣುರಾಮ್ ಮೇಧಿ, ಆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಉದ್ಘಾಟಿಸಿದ್ದರು.
ಸ್ಥಳೀಯ ಪ್ರಾಧಿಕಾರಗಳ ನಿರ್ಲಕ್ಷ್ಯದಿಂದಾಗಿ ಗ್ರಾಮದ ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದು, ಇದರಿಂದಾಗಿ ಗ್ರಾಮಸ್ಥರು ಗ್ರಾಮವನ್ನು ತೊರೆದಿದ್ದಾರೆ ಎನ್ನುತ್ತಾರೆ ಅನಿಮಾ.
“ಜಿಲ್ಲಾ ಪರಿಷತ್, ಗ್ರಾಮ ಪಂಚಾಯತ್ ಅಥವಾ ವಲಯಾಭಿವೃದ್ಧಿ ಕಚೇರಿಯಂಥ ಸ್ಥಳೀಯ ಸಂಸ್ಥೆಗಳು ಇಲ್ಲಿ ಯಾವುದೇ ಕೆಲಸ ಮಾಡಲು ಆಸಕ್ತಿ ತೋರುತ್ತಿಲ್ಲ” ಎಂದು ಆರೋಪಿಸಿರುವ ಅನಿಮಾ, ಕೃಷಿ ಮತ್ತು ಪಶು ಸಂಗೋಪನೆ ನಮ್ಮ ಮುಖ್ಯ ಜೀವನಾಧಾರವಾಗಿದೆ ಎಂದು ತಿಳಿಸಿದ್ದಾರೆ.
“ಒಂದು ವೇಳೆ ಸರ್ಕಾರವು ಇಲ್ಲಿ ರಸ್ತೆ ನಿರ್ಮಿಸಿ, ಮೂಲಸೌಕರ್ಯಗಳನ್ನು ಕಲ್ಪಿಸಿದರೆ, ಮತ್ತೆ ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಳವನ್ನು ಮರುಸ್ಥಾಪಿಸಬಹುದಾಗಿದ್ದು, ಜನರು ಮತ್ತೆ ಗ್ರಾಮಕ್ಕೆ ಮರಳಲಿದ್ದಾರೆ” ಎಂದೂ ಅನಿಮಾ ಹೇಳುತ್ತಾರೆ.