ಹಲ್ಲೆ ಪ್ರಕರಣ: ಪತ್ರಕರ್ತನನ್ನು ಭೇಟಿಯಾಗಿ ಕ್ಷಮೆಯಾಚಿಸಿದ ನಟ ಮೋಹನ್ ಬಾಬು
PC : X/@InformedAlerts
ಹೈದರಾಬಾದ್: ಕಳೆದ ವಾರ ವಿಡಿಯೊ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಹತ್ಯೆ ಯತ್ನದ ಪ್ರಕರಣವನ್ನು ಎದುರಿಸುತ್ತಿರುವ ಹಿರಿಯ ತೆಲುಗು ನಟ ಮೋಹನ್ ಬಾಬು, ಹಲ್ಲೆಗೊಳಗಾಗಿದ್ದ ವಿಡಿಯೊ ಪತ್ರಕರ್ತರನ್ನು ಇಂದು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಅವರು ಹಾಗೂ ಅವರ ಕುಟುಂಬದ ಸದಸ್ಯರಲ್ಲಿ ವೈಯಕ್ತಿಕವಾಗಿ ಕ್ಷಮೆಯಾಚಿಸಿದರು ಎಂದು ವರದಿಯಾಗಿದೆ.
ಡಿಸೆಂಬರ್ 10ರಂದು ನಟ ಮೋಹನ್ ಬಾಬು ಅವರ ಜಾಲಪಲ್ಲಿ ನಿವಾಸದಲ್ಲಿ ತಮ್ಮ ಮೇಲೆ ನಡೆದಿದ್ದ ಹಲ್ಲೆಯಿಂದ ವಿಡಿಯೊ ವರದಿಗಾರ ಮುಪ್ಪಡಿ ರಂಜಿತ್ ಕುಮಾರ್ ಅವರ ಕೆನ್ನೆಯ ಮೂಳೆ ಮುರಿದಿದ್ದು, ಅದಕ್ಕಾಗಿ ಅವರು ಯಶೋಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕುಮಾರ್, "ಮೋಹನ್ ಬಾಬು ನನಗೆ, ನನ್ನ ಕುಟುಂಬಕ್ಕೆ ಹಾಗೂ ಇಡೀ ಪತ್ರಕರ್ತರ ಬಳಗಕ್ಕೆ ಕ್ಷಮೆ ಯಾಚಿಸಿದರು" ಎಂದು ಹೇಳಿದ್ದಾರೆ.
ನಾನು ಒಮ್ಮೆ ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ, ನನ್ನ ಮನೆಗೆ ಭೇಟಿ ನೀಡುವುದಾಗಿಯೂ ಮೋಹನ್ ಬಾಬು ಹೇಳಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಹಿರಿಯ ತೆಲುಗು ನಟ ಮೋಹನ್ ಬಾಬು ಹಾಗೂ ಅವರ ಕಿರಿಯ ಪುತ್ರ ಮನೋಜ್ ನಡುವೆ ನಡೆಯುತ್ತಿರುವ ಜಗಳವನ್ನು ಚಿತ್ರೀಕರಿಸಲು ಮೋಹನ್ ಬಾಬು ಅವರ ನಿವಾಸಕ್ಕೆ ನಾನು ತೆರಳಿದ್ದೆನು. ಆಗ, ನನ್ನನ್ನು ಹಾಗೂ ಇನ್ನಿತರ ಪತ್ರಕರ್ತರನ್ನು ಅವಾಚ್ಯವಾಗಿ ನಿಂದಿಸಿದ್ದ ಮೋಹನ್ ಬಾಬು, ನನ್ನ ಮೈಕ್ರೋಫೋನ್ ಕಿತ್ತುಕೊಂಡು, ನನ್ನ ಮೇಲೆ ಹಲ್ಲೆ ನಡೆಸಿದ್ದರಿಂದ, ನನ್ನ ತಲೆಗೆ ಪೆಟ್ಟಾಗಿದೆ ಎಂದು ವಿಡಿಯೊ ಪತ್ರಕರ್ತ ಮುಪ್ಪಡಿ ರಂಜಿತ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದರು.