ಆಂಧ್ರಪ್ರದೇಶದಲ್ಲಿ ಆದಿವಾಸಿ ವ್ಯಕ್ತಿಯ ಮೇಲೆ ಹಲ್ಲೆ, ಮೂತ್ರ ವಿಸರ್ಜನೆ:6 ಜನರ ಬಂಧನ
ಸಾಂದರ್ಭಿಕ ಚಿತ್ರ | Photo: NDTV
ಪ್ರಕಾಶಂ: ಪ್ರಕಾಶಂ ಜಿಲ್ಲೆಯಲ್ಲಿ ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿದ ಆರೋಪದಲ್ಲಿ ಆರು ಜನರನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಜೂ.19ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬಾಲಕಿಯೋರ್ವಳೊಂದಿಗೆ ಆದಿವಾಸಿ ಮೋಟಾ ನವೀನ್ ಸಂಬಂಧವನ್ನು ಪ್ರಶ್ನಿಸಿ ಮನ್ನಂ ರಾಮಾಂಜನೇಯುಲು ಮತ್ತು ಇತರ ಎಂಟು ಜನರು ಆತನನ್ನು ಥಳಿಸಿ,ಆತನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ.
ರಾಮಾಂಜನೇಯುಲು ಮತು ನವೀನ್ ಹಿಂದೆ ಸ್ನೇಹಿತರಾಗಿದ್ದು,ಹಲವಾರು ಆಸ್ತಿ ಸಂಬಂಧಿತ ಅಪರಾಧಗಳಲ್ಲಿ ಭಾಗಿಯಾಗಿದ್ದರು. ಆದರೆ ಕಳ್ಳತನದ ವಸ್ತುಗಳನ್ನು ಹಂಚಿಕೊಳ್ಳುವ ವಿಷಯದಲ್ಲಿ ಅವರ ನಡುವೆ ವಿವಾದ ಉಂಟಾಗಿತ್ತು. ರಾಮಾಂಜನೇಯುಲುವಿನ ಸ್ನೇಹಿತನ ಸಂಬಂಧಿ ಬಾಲಕಿಯೊಂದಿಗೆ ನವೀನ್ಸಂಬಂಧದಿಂದಾಗಿ ಅವರಿಬ್ಬರ ನಡುವಿನ ಸ್ನೇಹ ಇನ್ನಷ್ಟು ಹಳಸಿತ್ತು ಎಂದು ಎಸ್ಪಿ ಮಲ್ಲಿಕಾ ಗರ್ಗ್ ಸುದ್ದಿಸಂಸ್ಥೆಗೆ ತಿಳಿಸಿದರು.
ನವೀನ್ ಬಾಲಕಿಯೊಂದಿಗೆ ಪರಾರಿಯಾಗಿದ್ದು ಆತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು,ಆದರೂ ಆತ ಬಾಲಕಿಯೊಂದಿಗೆ ಸಂಬಂಧವನ್ನು ಮುಂದುವರಿಸಿದ್ದ. ಇದು ರಾಮಾಂಜನೇಯುಲು ಮತ್ತು ಆತನ ಸ್ನೇಹಿತರ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿತ್ತು.
ರಾಜಿ ಮಾಡಿಕೊಳ್ಳುವ ನೆಪದಲ್ಲಿ ನವೀನ್ನನ್ನು ನಿರ್ಜನ ಸ್ಥಳಕ್ಕೆ ಕರೆಸಿದ್ದ ರಾಮಾಂಜನೇಯುಲು ಮತ್ತು ಸ್ನೇಹಿತರು ಆತನ ಮೇಲೆ ಹಲ್ಲೆ ನಡೆಸಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು.
ಬಂಧಿತರಲ್ಲಿ ಮೂವರು ಅಪ್ರಾಪ್ತ ವಯಸ್ಕರು ಸೇರಿದ್ದು,ತಲೆ ಮರೆಸಿಕೊಂಡಿರುವ ರಾಮಾಂಜನೇಯುಲು ಮತ್ತು ಇತರರಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.