ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾರನ್ನು ಪ್ರಶ್ನಿಸಿದ್ದಕ್ಕೆ ರಾಹುಲ್ ಗಾಂಧಿ ತಂಡದಿಂದ ನನ್ನ ಮೇಲೆ ಹಲ್ಲೆ : ಪತ್ರಕರ್ತನ ಆರೋಪ
Photo : PTI
ಹೊಸದಿಲ್ಲಿ: ರಾಹುಲ್ ಗಾಂಧಿ ಭಾರತದಲ್ಲಿದ್ದಾಗ ಬಾಂಗ್ಲಾದೇಶದಲ್ಲಿನ ಹಿಂದೂಗಳ ಕುರಿತು ಪ್ರಶ್ನೆ ಎತ್ತುವರೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾರನ್ನು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ತಂಡವು ನನ್ನ ಕೈಯಿಂದ ಫೋನ್ ಕಸಿದುಕೊಂಡು, ಸ್ಯಾಮ್ ಪಿತ್ರೋಡಾರೊಂದಿಗಿನ ಸಂದರ್ಶನವನ್ನು ಅಳಿಸಿ ಹಾಕಿದೆ ಎಂದು ಪತ್ರಕರ್ತರೊಬ್ಬರು ಆರೋಪಿಸಿದ್ದಾರೆ.
India Today ಸುದ್ದಿ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ರೋಹಿತ್ ಶರ್ಮ, ತಾನು ಸ್ಯಾಮ್ ಪಿತ್ರೋಡಾರನ್ನು ರಾಹುಲ್ ಗಾಂಧಿ ಭಾರತದಲ್ಲಿರುವಾಗ ಬಾಂಗ್ಲಾದೇಶದಲ್ಲಿನ ಹಿಂದೂಗಳ ಕುರಿತು ಪ್ರಶ್ನೆ ಎತ್ತುವರೆ ಎಂದು ಪ್ರಶ್ನಿಸಿದೆ. ಅದಕ್ಕೆ ಸ್ಯಾಮ್ ಪಿತ್ರೋಡಾ ಪೂರ್ಣಪ್ರಮಾಣದಲ್ಲಿ ಉತ್ತರ ನೀಡುವುದಕ್ಕೂ ಮುನ್ನವೇ, ಆ ಕೋಣೆಯಲ್ಲಿದ್ದ ಓರ್ವ ವ್ಯಕ್ತಿ ನನ್ನ ಆ ಪ್ರಶ್ನೆ ಯನ್ನು ವಿವಾದಾತ್ಮಕ ಎಂದು ಆಕ್ಷೇಪಿಸಿದ. ಆತನೊಂದಿಗೆ ಇತರರೂ ಸೇರಿಕೊಂಡಿದ್ದರಿಂದ ಪ್ರಕ್ಷುಬ್ಧತೆ ಉಂಟಾಯಿತು. ಇದಾದ ನಂತರ, ರಾಹುಲ್ ಗಾಂಧಿ ತಂಡದವರು ನನ್ನತ್ತ ಧಾವಿಸಿ, ನನ್ನ ಫೋನ್ ಕಸಿದುಕೊಂಡು, ಸಂದರ್ಶನವನ್ನು ನಿಲ್ಲಿಸಿ ಎಂದು ಕೂಗಾಡತೊಡಗಿದರು ಎಂದು ಬರೆದುಕೊಂಡಿದ್ದಾರೆ.
“ಓರ್ವ ವ್ಯಕ್ತಿ ನನ್ನ ಮೈಕ್ ಅನ್ನು ಕಿತ್ತುಕೊಳ್ಳಲು ಯತ್ನಿಸಿದ. ಆದರೆ, ನಾನು ಪ್ರತಿರೋಧ ತೋರಿದೆ. ಅವರು ನನ್ನ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡು ಚಿತ್ರೀಕರಣವನ್ನು ಸ್ಥಗಿತಗೊಳಿಸಿದರು. ಸ್ಥಳದಲ್ಲಿ ಉದ್ವಿಗ್ನತೆ ಪ್ರಾರಂಭಗೊಳ್ಳುತ್ತಿದ್ದಂತೆಯೆ ಸ್ಯಾಮ್ ಪಿತ್ರೋಡಾ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ತೆರಳಿದರು” ಎಂದೂ ಬರೆದುಕೊಂಡಿದ್ದಾರೆ.
ಆ ಕೋಣೆಯಲ್ಲಿ ಕನಿಷ್ಠ ಪಕ್ಷ 15 ಮಂದಿಯಿದ್ದರು. ಅವರೆಲ್ಲ ನನಗೆ ಸಂದರ್ಶನವನ್ನು ಅಳಿಸಿ ಹಾಕುವಂತೆ ಒತ್ತಡ ಹೇರಿದರು ಎಂದೂ ಅವರು ಆರೋಪಿಸಿದ್ದಾರೆ.
ಈ ಕುರಿತು India Today ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಸ್ಯಾಮ್ ಪಿತ್ರೋಡಾ, ನನಗೆ ಘಟನೆಯ ಬಗ್ಗೆ ಅರಿವಿಲ್ಲ ಎಂದು ಹೇಳಿದ್ದಾರೆ.
“ನಾನು ಅಲ್ಲಿರಲಿಲ್ಲ. ನಾನು ರೋಹಿತ್ ಶರ್ಮಗೆ ಸಂದರ್ಶನ ನೀಡಿದ ನೆನಪಿಲ್ಲ. ಅವರು ತುಂಬಾ ಉಲ್ಲಾಸಭರಿತ ವ್ಯಕ್ತಿಯಾಗಿದ್ದರು ಹಾಗೂ ನಮ್ಮಿಬ್ಬರ ನಡುವೆ ಸಭ್ಯ ಸಂವಾದ ನಡೆಯಿತು. ನನಗೆ ಆ ಘಟನೆಯ ಬಗ್ಗೆ ತಿಳಿದಿಲ್ಲ. ಒಂದು ವೇಳೆ ಏನಾದರೂ ಆಗಿದ್ದರೆ, ನಾನು ಆ ಕುರಿತು ಪರಿಶೀಲಿಸಲಿದ್ದೇನೆ. ನನಗೆ ಈ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲ. ನನಗೆ ವಾಸ್ತವಗಳನ್ನು ಪರಿಶೀಲಿಸಬೇಕಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ಬೆನ್ನಿಗೇ, ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ್ದಾರೆ.