ಮ.ಪ್ರ.: ದಲಿತ ವ್ಯಕ್ತಿಗೆ ಹಲ್ಲೆ ನಡೆಸಿ, ಆತನ ಮೇಲೆ ಮೂತ್ರ ವಿಸರ್ಜನೆ; ಬಿಜೆಪಿ ಶಾಸಕನ ಆಪ್ತ ಸೇರಿ ಐವರ ಬಂಧನ
ಸಾಂದರ್ಭಿಕ ಚಿತ್ರ.
ಭೋಪಾಲ್: ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಥಳಿಸಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ಭೋಪಾಲದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ 5 ಮಂದಿಯನ್ನು ಬಂಧಿಸಲಾಗಿದೆ. ಭೋಪಾಲದ ಸುಖಿ ಸೆವನಿಯ ಪೊಲೀಸ್ ಠಾಣಾ ವ್ಯಾಪ್ತಿಯ ಚೋಪ್ರಾ ಕಲಾನ್ ಗ್ರಾಮದಲ್ಲಿ ರವಿವಾರ (ಸೆಪ್ಟಂಬರ್ 10) ಈ ಘಟನೆ ನಡೆದಿದೆ. ಸರಕಾರಿ ಭೂಮಿಯನ್ನು ಗುಂಪೊಂದು ಅತಿಕ್ರಮಿಸಲು ಮುಂದಾದಾಗ ಕಾವಲುಗಾರನಾಗಿದ್ದ ದಲಿತ ಸಮುದಾಯದ ರಾಮಸ್ವರೂಪ್ ಅಹಿರ್ವಾರ್ ತಡೆ ಒಡ್ಡಿದ್ದರು.
ಈ ಹಿನ್ನೆಲೆಯಲ್ಲಿ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ‘‘ಗ್ರಾಮ ಮುಖ್ಯಸ್ಥೆಯ ಪತಿ ಶೇರು ಮೀನಾ ಸೇರಿದಂತೆ ಗೂಂಡಾಗಳು ತನ್ನ ಮೇಲೆ ದಾಳಿ ನಡೆಸಿದ್ದಾರೆ’’ ಎಂದು ಅಹಿರ್ವಾರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಶೇರು ಮೀನಾ ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಅವರ ಆಪ್ತ ಎಂದು ಹೇಳಲಾಗಿದೆ.
“ಗೂಂಡಾಗಳು ತನ್ನ ಕೈ ಕಟ್ಟಿ ಕಾರಿಗೆ ಹಾಕಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ತನಗೆ ನಿರಂತರ ಥಳಿಸಿ, ತನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದರು ಎಂದು ಅಹಿರ್ವಾರ್ ಆರೋಪಿಸಿದ್ದಾರೆ. ಅನಂತರ ಅವರು ತನ್ನನ್ನು ಶೇರು ಮೀನಾನ ಮನೆಗೆ ಕರೆದೊಯ್ದರು. ಅಲ್ಲಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದರು.
ತಾನು ಪ್ರಜ್ಞೆ ಕಳೆದುಕೊಳ್ಳುವ ವರೆಗೆ ನಿರಂತರ ಥಳಿಸಿದರು’’ ಎಂದು ಅವರು ಹೇಳಿದ್ದಾರೆ. ಅಹಿರ್ವಾರ್ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ 7 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ (ಎಸ್ಪಿ) ಪ್ರಮೋದ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ