ಉತ್ತರ ಪ್ರದೇಶ, ಕೇರಳ, ಪಂಜಾಬ್ನಲ್ಲಿ ಅಸೆಂಬ್ಲಿ ಉಪಚುನಾವಣೆಗಳು ನ.20ಕ್ಕೆ ಮುಂದೂಡಿಕೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಚುನಾವಣಾ ಆಯೋಗವು ಸೋಮವಾರ ಉತ್ತರ ಪ್ರದೇಶ, ಕೇರಳ ಮತ್ತು ಪಂಜಾಬ್ಗಳಲ್ಲಿ ವಿಧಾನಸಭಾ ಉಪಚುನಾವಣೆಗಳ ದಿನಾಂಕವನ್ನು ನ.13ರಿಂದ ನ.20ಕ್ಕೆ ಮುಂದೂಡಿದೆ. ಹಬ್ಬಗಳ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುವ ಆತಂಕವಿದೆ,ಹೀಗಾಗಿ ಚುನಾವಣಾ ದಿನಾಂಕವನ್ನು ಮುಂದೂಡುವಂತೆ ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಮತ್ತು ಆರ್ಎಲ್ಡಿ ಸೇರಿದಂತೆ ವಿವಿಧ ಪಕ್ಷಗಳು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದವು.
ಉ.ಪ್ರದೇಶದಲ್ಲಿ ಒಂಭತ್ತು, ಪಂಜಾಬಿನಲ್ಲಿ ನಾಲ್ಕು ಮತ್ತು ಕೇರಳದಲ್ಲಿ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ.
ಕೇರಳದ ಪಾಲಕ್ಕಾಡ್ ವಿಧಾನಸಭಾ ವ್ಯಾಪ್ತಿಯಲ್ಲಿ ಜನರು ನ.13ರಿಂದ 15ರವರೆಗೆ ‘ಕಲ್ಪಾತಿ ರಸ್ತೋಲಸವಂ’ ಉತ್ಸವವನ್ನು ಆಚರಿಸುತ್ತಾರೆ. ಪಂಜಾಬಿನಲ್ಲಿ ನ.15ರಂದು ಗುರು ನಾನಕ್ ದೇವ್ ಅವರ 555ನೇ ಪ್ರಕಾಶ ಪರ್ವ ನಡೆಯಲಿದ್ದು,ನ.13ರಿಂದ ‘ಅಖಂಡ ಪಥ’ವನ್ನು ಆಯೋಜಿಸಲಾಗಿದೆ.ಉತ್ತರ ಪ್ರದೇಶದಲ್ಲಿ ನ.15ರಂದು ಕಾರ್ತಿಕ ಹುಣ್ಣಿವೆಯನ್ನು ಆಚರಿಸಲಾಗುತ್ತಿದ್ದು,ಜನರು 3-4 ದಿನಗಳ ಮೊದಲೇ ವಿವಿಧ ಪುಣ್ಯಕ್ಷೇತ್ರಗಳಿಗೆ ಪ್ರಯಾಣಿಸುತ್ತಾರೆ.