ಸಿಕ್ಕಿಂ, ಅರುಣಾಚಲ ವಿಧಾನಸಭೆ ಚುನಾವಣೆ ಮತ ಎಣಿಕೆ ಆರಂಭ
ಸಿಕ್ಕಿಂನಲ್ಲಿರುವ 32 ಸ್ಥಾನಗಳ ಪೈಕಿ 24 ಕಡೆ ಎಸ್‌ಕೆಎಂ ಗೆ ಆರಂಭಿಕ ಮುನ್ನಡೆ
ಹೊಸದಿಲ್ಲಿ: ಲೋಕಸಭೆಯ ಮೊದಲ ಹಂತದ ಚುನಾವಣೆ ಜತೆಗೆ ನಡೆದ ಸಿಕ್ಕಿಂ ಮತ್ತು ಅರುಣಾಚಲ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಂಜಾನೆ 6 ಗಂಟೆಗೆ ಆರಂಭವಾಗಿದೆ.
ಅರುಣಾಚಲ ಪ್ರದೇಶ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 10 ಸ್ಥಾನಗಳನ್ನು ಬಿಜೆಪಿ ಈಗಾಗಲೇ ಅವಿರೋಧವಾಗಿ ಗೆದ್ದಿದ್ದು, ಉಳಿದ 50 ಸ್ಥಾನಗಳಲ್ಲಿ ಮತ ಎಣಿಕೆ ಆರಂಭವಾಗಿದೆ. ಸಿಕ್ಕಿಂ ವಿಧಾನಸಭೆಯ 32 ಕ್ಷೇತ್ರಗಳಲ್ಲೂ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ಸಿಕ್ಕಿಂನಲ್ಲಿರುವ 32 ಸ್ಥಾನಗಳ ಪೈಕಿ 24 ಕಡೆ ಎಸ್‌ಕೆಎಂ ಆರಂಭಿಕ ಮುನ್ನಡೆ ಸಾಧಿಸಿದೆ.
ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 24 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) 4 ಕಡೆ ಹಾಗೂ ಇತರೆ ಅಭ್ಯರ್ಥಿಗಳು 6 ಕಡೆ ಮುನ್ನಡೆಯಲ್ಲಿದ್ದಾರೆ.
ಸಾರ್ವತ್ರಿಕ ಚುನಾವಣೆ ಘೋಷಣೆಯ ಮರುದಿನವೇ ಚುನಾವಣಾ ಆಯೋಗ, ಈ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಜೂನ್ 2ರಂದು ಹೊರಬೀಳಲಿದೆ ಎಂದು ಆಯೋಗ ಪ್ರಕಟಿಸಿತ್ತು. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಅರುಣಾಚಲ ವಿಧಾನಸಭೆಯಲ್ಲಿ ಬಿಜೆಪಿ 44-51 ಕ್ಷೇತ್ರಗಳನ್ನು ಗೆಲ್ಲಲಿದ್ದು, ಕಾಂಗ್ರೆಸ್ 1-4 ಕ್ಷೇತ್ರಗಳಲ್ಲಷ್ಟೇ ಗೆಲುವು ಸಾಧಿಸಲಿದೆ. ಎನ್ಪಿಪಿ 2-6 ಹಾಗೂ ಇತರರು 2-6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಸಿಕ್ಕಿಂನಲ್ಲಿ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) ಸತತ ಎರಡನೇ ಬಾರಿ ಅಧಿಕಾರದ ಸೂತ್ರ ಹಿಡಿಯುವ ಹುಮ್ಮಸ್ಸಿನಲ್ಲಿದ್ದರೆ ವಿರೋಧ ಪಕ್ಷವಾದ ಎಸ್ಡಿಎಫ್ ಸರ್ಕಾರವನ್ನು ಕಿತ್ತೊಗೆಯುವ ವಿಶ್ವಾಸದಲ್ಲಿದೆ.
2019ರ ಚುನಾವಣೆಯಲ್ಲಿ ಎಸ್ಕೆಎಂ 17 ಸ್ಥಾನಗಳನ್ನು ಗೆದ್ದು, ಪ್ರೇಮ್ ಸಿಂಗ್ ತಮಾಂಗ್ ಮುಖ್ಯಮಂತ್ರಿಯಾಗಿದ್ದರು. ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಕಳೆದ ಬಾರಿ 60 ಕ್ಷೇತ್ರಗಳ ಪೈಕಿ 41ನ್ನು ಬಗಲಿಗೆ ಹಾಕಿಕೊಂಡಿತ್ತು. ಈ ಬಾರಿ ಅರುಣಾಚಲ ವಿಧಾನಸಭೆ ಚುನಾವಣೆಯಲ್ಲಿ ಶೇಕಡ 82.95ರಷ್ಟು ಮತದಾನ ನಡೆದಿತ್ತು.