ಅಸ್ತಮಾ, ಕ್ಷಯ, ಮಾನಸಿಕ ಆರೋಗ್ಯ ಔಷಧಿಗಳ ಬೆಲೆಗಳಲ್ಲಿ ಶೇ.50ರಷ್ಟು ಏರಿಕೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದ ಔಷಧಿ ಬೆಲೆ ನಿಗದಿ ಪ್ರಾಧಿಕಾರವು ಕೆಲವು ಅಗತ್ಯ ಔಷಧಿಗಳ ಬೆಲೆಗಳನ್ನು ಶೇ.50ರಷ್ಟು ಹೆಚ್ಚಿಸಿದೆ. ಹೆಚ್ಚಿನವು ಅಗ್ಗದ ದರಗಳಲ್ಲಿ ಲಭ್ಯವಿರುವ ಈ ಔಷಧಿಗಳು ಅಸ್ತಮಾ,ಗ್ಲಾಕೋಮಾ,ಥಲಸೇಮಿಯಾ,ಕ್ಷಯ ಮತ್ತು ಮಾನಸಿಕ ಅಸ್ವಸ್ಥತೆಯಂತಹ ರೋಗಗಳಿಗೆ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ.
ಉತ್ಪಾದನಾ ವೆಚ್ಚವು ಹೆಚ್ಚಾಗಿರುವುದರಿಂದ ಹಾಲಿ ದರಗಳಲ್ಲಿ ಔಷಧಿಗಳನ್ನು ಮಾರಾಟ ಮಾಡುವುದು ಕಷ್ಟ,ಹೀಗಾಗಿ ಕೆಲವು ಔಷಧಿಗಳ ಬೆಲೆಗಳ್ನು ಹೆಚ್ಚಿಸಲು ಅನುಮತಿ ನೀಡುವಂತೆ ಔಷಧಿ ತಯಾರಿಕೆ ಕಂಪನಿಗಳು ರಾಷ್ಟ್ರೀಯ ಔಷಧಿ ಬೆಲೆ ನಿಗದಿ ಪ್ರಾಧಿಕಾರ (ಎನ್ಪಿಪಿಎ)ಕ್ಕೆ ಆಗ್ರಹಿಸುತ್ತಲೇ ಇದ್ದವು,ಈ ಹಿನ್ನೆಲೆಯಲ್ಲಿ ಔಷಧಿಗಳ ಬೆಲೆಗಳನ್ನು ಹೆಚ್ಚಿಸಲಾಗಿದೆ.
ಕೆಲವು ಕಂಪನಿಗಳು ಲಾಭದಾಯಕವಲ್ಲದ ಕೆಲವು ಔಷಧಿಗಳ ಉತ್ಪಾದನೆಯನ್ನು ನಿಲ್ಲಿಸಲೂ ಅನುಮತಿಗಾಗಿ ಕೋರಿಕೊಂಡಿವೆ.
ಎನ್ಪಿಪಿಎ ಔಷಧಿಗಳ( ಬೆಲೆ ನಿಯಂತ್ರಣ) ಕಾಯ್ದೆ,2013ರ ಪ್ಯಾರಾ 19ರಡಿ ಎಂಟು ಅಗತ್ಯ ಔಷಧಿಗಳಿಂದ 11 ಅನುಸೂಚಿತ ಸೂತ್ರೀಕರಣಗಳ ನಿರ್ಬಂಧಿತ ಬೆಲೆಗಳನ್ನು ಅ.8ರಂದು ಪರಿಷ್ಕರಿಸಿದೆ.
ನಿರ್ಬಂಧಿತ ಬೆಲೆಯು ಮಾರಾಟಗಾರರು ಉತ್ಪನ್ನ ಅಥವಾ ಸೇವೆಗೆ ವಿಧಿಸಬಹುದಾದ ಗರಿಷ್ಠ ದರವಾಗಿದೆ.
ಈ ಔಷಧಿಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಲ್ಲಿ ಶೇ.50ರಷ್ಟು ಬೆಲೆ ಏರಿಕೆಯನ್ನು ಅನುಮೋದಿಸಲಾಗಿದೆ ಎಂದು ಎನ್ಪಿಪಿಎ ತಿಳಿಸಿದೆ.
ಬೆಲೆ ಪರಿಷ್ಕರಣೆಗೊಂಡ ಔಷಧಿಗಳು:
► ವಿವಿಧ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಬೆಂಝಿಲ್ ಪೆನ್ಸಿಲಿನ್ 10 ಲ್ಯಾಖ್ ಐಯು ಇಂಜೆಕ್ಷನ್
► ಬ್ರಾಡಿಕಾರ್ಡಿಯಾ (ನಿಧಾನ ಹೃದಯ ಬಡಿತ) ಚಿಕಿತ್ಸೆಗಾಗಿ ಎಟ್ರೋಪಿನ್ ಇಂಜೆಕ್ಷನ್ 06 ಎಂಜಿ/ಎಂಎಲ್
► ಕ್ಷಯರೋಗ ಮತ್ತು ಇತರ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಬಳಕೆಯಾಗುವ ಸ್ಟ್ರೆಪ್ಟೊಮೈಸಿನ್ ಪೌಡರ್(ಇಂಜೆಕ್ಷನ್ಗಾಗಿ) 750 ಎಂಜಿ ಮತ್ತು 1000 ಎಂಜಿ
► ಅಸ್ತಮಾ ಮತ್ತು ಇತರ ಉಸಿರಾಟ ರೋಗಗಳಿಗಾಗಿ ಸಾಲ್ಬುಟಾಮಲ್ ಮಾತ್ರೆ 2 ಎಂಜಿ ಮತ್ತು 4 ಎಂಜಿ ಮತ್ತು ರೆಸ್ಪಿರೇಟರ್ ಸೊಲ್ಯೂಷನ್ 5 ಎಂಜಿ/ಎಂಎಲ್
► ಗ್ಲಾಕೋಮಾ ಚಿಕಿತ್ಸೆಗಾಗಿ ಪೈಲೊಕಾರ್ಪೈನ್ ಶೇ.2 ಹನಿಗಳು
► ಕೆಲವು ಬ್ಯಾಕ್ಟೀರಿಯಾ ಸೋಂಕುಗಳಿಗಾಗಿ ಸಿಫಾಡ್ರೊಕ್ಸಿಲ್ ಮಾತ್ರೆ 500 ಎಂಜಿ
► ರಕ್ತಹೀನತೆ ಮತ್ತು ಥಲಸೇಮಿಯಾಕ್ಕಾಗಿ ಡೆಸ್ಪೆರಿಯೊಕ್ಸಮೈನ್ 500 ಎಂಜಿ (ಇಂಜಕ್ಷನ್ಗಾಗಿ)
► ಮಾನಸಿಕ ಅಸ್ವಸ್ಥತೆಯ ಚಿಕಿತ್ಸೆಗಾಗಿ ಲೀಥಿಯಂ ಮಾತ್ರೆಗಳು 300 ಎಂಜಿ